ನವದೆಹಲಿ,ಮೇ.4- ಪೆಹಲ್ಗಾಮ್ ದಾಳಿಗೆ ಸ್ಥಳೀಯರ ಸಹಕಾರದ ಬಗ್ಗೆ ರಾಷ್ಟ್ರೀಯ ತನಿಖಾ ದಳ ಗಂಭೀರ ಸ್ವರೂಪದ ತನಿಖೆ ನಡೆಸುತ್ತಿದ್ದು, ಘಟನೆಯ ದಿನ ವ್ಯಕ್ತಿಯೊಬ್ಬರು ಅಂಗಡಿಯನ್ನು ತೆರೆಯದೇ ಇರುವ ಬಗ್ಗೆ ವಿಚಾರಣೆ ಆರಂಭಿಸಲಾಗಿದೆ.
ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿರುವ ಎನ್‌ಐಎ ಈವರೆಗೂ ಪಹಲ್ಗಾಮ್ ನ ಭೈರಸರನ್ ಕಣಿವೆಯಲ್ಲಿ 15 ದಿನಗಳ ಹಿಂದೆ ಒಬ್ಬರು ಅಂಗಡಿಯನ್ನು ಆರಂಭಿಸಿದ್ದು, ಭಯೋತ್ಪಾದಕರ ದಾಳಿ ನಡೆದ ಏ.22 ರಂದು ಆ ಅಂಗಡಿ ಮುಚ್ಚಿರುವ ಬಗ್ಗೆ ಅನುಮಾನ ಕೇಂದ್ರೀಕೃತವಾಗಿದೆ.
ಎನ್‌ಐಎನ ನಿರ್ದೇಶಕರೇ ಖುದ್ದು ಪಹಲ್ಯಾಮ್ಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. 26 ಮಂದಿ ಅಮಾಯಕರ ಜೀವವನ್ನು ಬಲಿ ಪಡೆದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ರಾಷ್ಟ್ರೀಯ ತನಿಖಾ ದಳ ಬಿರುಸಿನ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಸ್ಥಳೀಯ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮಾಲೀಕರು ಪೋನಿ ಅಪರೇಟರ್ಸ್ ಫೋಟೊಗ್ರಾಫರ್ಸ್, ಸಾಹಸ ಕ್ರೀಡೆಗಳ ನಿರ್ವಾಹಕರು ಸೇರಿದಂತೆ ಎಲ್ಲರನ್ನೂ ವಿಚಾರಣೆಗೊಳಪಡಿಸಿದ್ದು, ಅವರ ಸಂಪರ್ಕಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಿದ್ದಾರೆ.
ಜಿಪ್‌ಲೈನ್‌ನಲ್ಲಿ ವ್ಯಕ್ತಿಯೊಬ್ಬರನ್ನು ಕಳುಹಿಸಿ ಅಲ್ಲಾಹು ಅಕ್ಟರ್ ಎಂದು ಕೂಗಿದ ವ್ಯಕ್ತಿಯನ್ನು ಎನ್‌ಐಎ ವಿಚಾರಣೆಗೊಳಪಡಿಸಿ ಕ್ಲೀನ್ ಚಿಟ್ ನೀಡಿದೆ. ದಾಳಿಗೆ ಪ್ರಮುಖ ಸಾಕ್ಷಿಯಾಗಿ ಜಿಪ್ ಲೈನ್‌ನಲ್ಲಿ ವ್ಯಕ್ತಿ ಮಾಡಿದ ವಿಡಿಯೋ ಪರಿಗಣಿಸಲ್ಪಟ್ಟಿದೆ. ಜಿಪ್‌ಲೈನ್‌ನಲ್ಲಿನ ತುದಿಯಲ್ಲಿದ್ದ ವ್ಯಕ್ತಿ ಭಯದಿಂದ ಅಲ್ಲಾಹು ಅಕ್ಟರ್ ಎಂದು ಕೂಗಿದ್ದಾಗಿ ಹೇಳಲಾಗಿದೆ.
ಆತ ಪದೇಪದೇ ಈ ರೀತಿ ಹೇಳಿಕೊಳ್ಳುವುದು ಸಾಮಾನ್ಯ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಭಯದಿಂದ ಅಲ್ಲಿಂದ ಮನೆಗೆ ಓಡಿಬಂದಿದ್ದಾನೆ. ಸಂಜೆ ವೇಳೆಗೆ ಸುಧಾರಿಸಿಕೊಂಡು ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅದಕ್ಕೂ ಮುನ್ನ ಆತ ಯಾರೊಂದಿಗೂ ದೂರವಾಣಿಯಲ್ಲಿ ಮಾತನಾಡಿರುವ ಸಾಧ್ಯತೆಗಳಿಲ್ಲ ಎಂದು ಎನ್‌ಐಎ ಹೇಳಿದೆ.
ಈ ಹಿಂದೆ 2023 ರ ಆಗಸ್ಟ್‌ನಲ್ಲಿ ಪುಲ್ಟಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಾಗಿ ಏರ್‌ಫೋರ್ಸ್ ಮೂವರು ಯೋಧರು ಹತ್ಯೆಯಾಗಿದ್ದರು, ನಾಲ್ವರು ಗಾಯಗೊಂಡಿದ್ದರು. ಆ ಘಟನೆ ನಡೆಸಿದ ಗುಂಪು ಪಹಲ್ಯಾಮ್ ದಾಳಿ ನಡೆಸಿರಬಹುದು ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಹಿಂದೆ ನಡೆದಿರುವ ಎಲ್ಲಾ ಭಯೋತ್ಪಾದಕ ದಾಳಿಯ ಮಾಹಿತಿಗಳನ್ನು ಕ್ರೂಢೀಕರಿಸಿಕೊಂಡು ರಾಷ್ಟ್ರೀಯ ತನಿಖಾ ದಳ ಆರೋಪಿಗಳ ಸುಳಿವಿನ ಬೆನ್ನು ಹತ್ತಿದೆ. ಜಮ್ಮು-ಕಾಶ್ಮೀರ ಪೊಲೀಸರು ರಾಜ್ಯದ ಹಲವು ನಗರಗಳಲ್ಲಿ ಕಳೆದೆರಡು ದಿನಗಳಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಯೋತ್ಪಾದಕರಿಗೆ ವಾಸ್ತವ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸಿರುವವರನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.
ಏ.22ರ ದಾಳಿಯ ಬಳಿಕ ಆರೋಪಿಗಳು ಚೆನ್ನೈ ವಿಮಾನನಿಲ್ದಾಣದಿಂದ ಶ್ರೀಲಂಕಾಕ್ಕೆ ಪ್ರವಾಸ ಮಾಡಿದ್ದಾರೆ ಎಂಬ ಸುಳಿವಿನ ಮೇಲೆ ಕೊಲೊಂಬೊದ ಪೊಲೀಸರು ಶಂಕಿತ ವಿಮಾನಗಳಲ್ಲಿ ಪ್ರಯಾಣಿಸಿದ ಎಲ್ಲರ ಮಾಹಿತಿಗಳನ್ನೂ ಶೋಧಿಸಲಾರಂಭಿಸಿದ್ದಾರೆ.