ಬೆಂಗಳೂರು,ಮೇ4-ಐಪಿಎಲ್ ಪಂದ್ಯಾವಳಿಯ ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ ನಡುವಿನ ಪಂದ್ಯದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ ಒಂದು ಲಕ್ಷ ನಗದು, 32 ಟಿಕೆಟ್‌ಗಳು, 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚರಣ್ ರಾಜ್, ವಿನಯ್, ವೆಂಕಟಸಾಯಿ ಕಿರಣ್ ಹಾಗೂ ಹರ್ಷವರ್ಧನ್ ಬಂಧಿತ ಆರೋಪಿಗಳು.
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಒಬ್ಬನನ್ನು ಬಂಧಿಸಿ ಆತನಿಂದ 1200 ರೂ. ಬೆಲೆಯ 12 ಟಿಕೆಟ್ ಗಳು, ಒಂದು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಈತನ ಇತರ ಮೂವರು ಸಹಚರರು ಕೂಡ ಇದರಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ತಕ್ಷಣ ಮಿಲ್ಲರ್ಸ್ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಬಳಿ ಈ ಮೂವರನ್ನು ವಶಕ್ಕೆ ಪಡೆದು, 1 ಲಕ್ಷನಗದು, 1200 ರೂ. ಮುಖಬೆಲೆಯ 20 ಟಿಕೆಟ್‌ಗಳು ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.