ಬೆಂಗಳೂರು, ಮೇ 4- ಹಿಂದುಳಿದ ಪ್ರತಿಯೊಂದು ಸಮುದಾಯಗಳಿಗೆ ಆದ್ಯತೆ ನೀಡಿದರೆ ಬಸವಾದಿ ಶರಣರು, ಬುದ್ಧ ಮತ್ತು ಅಂಬೇಡ್ಕರ್ ಅವರು ಹೇಳಿದ ಸಮ- ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಾಧ್ಯವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಇರಬಾರದು. ಎಲ್ಲ ಸಮುದಾಯವರಿಗೂ ಸಮವಾಗಿ ಸವಲತ್ತುಗಳು ದೊರೆಯುವಂತಾಗಬೇಕು. ನಮ ಸರ್ಕಾರ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬದ್ಧತೆಯನ್ನು ಇಟ್ಟುಕೊಂಡಿದೆ ಎಂದು ಹೇಳಿದರು.
ಎರಡು ತಿಂಗಳಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 42 ಕೋಟಿ ರೂ. ಅನುದಾನ ನೀಡಲಾಗಿದೆ. ಇಷ್ಟು ಮೊತ್ತದ ಅನುದಾನವನ್ನು ಯಾರು ಕೂಡ ನೀಡಿರಲಿಲ್ಲ ಎಂದರು.
ನಿರಂತರ ಪ್ರಯತ್ನದ ಫಲವಾಗಿ ಏನನ್ನು ಬೇಕಾದರೂ ಪಡೆಯಬಹುದು ಎಂಬ ಮಾತಿಗೆ ಭಗೀರಥ ಪ್ರತಿರೂಪದಂತಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮನೆ ಬಿಟ್ಟು ಹೋಗುವುದು, ಅನಾಹುತಗಳನ್ನು ಮಾಡಿಕೊಳ್ಳುವುದು ನಿಜಕ್ಕೂ ದುರದೃಷ್ಟಕರ. ಹೀಗಾಗಿ ಮಕ್ಕಳಿಗೆ ನಿರಂತರ ಪ್ರಯತ್ನ ಮಾಡುವ ಬಗ್ಗೆ ಭಗೀರಥ ಹಾಗೂ ಇನ್ನಿತರ ಆದರ್ಶವುಳ್ಳ ಕಥೆಗಳನ್ನು ಪೋಷಕರು ತಿಳಿಸಬೇಕಿದೆ ಎಂದು ಅವರು ಕಿವಿ ಮಾತು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಅವರ ವರದಿ ಅವೈಜ್ಞಾನಿಕವಾಗಿದೆ ಎಂದು ವಿರೋಧಿಸುತ್ತಿದ್ದಾರೆ. ಪ್ರತಿಯೊಂದು ಸಮುದಾಯದವರು ನಮವರು ರಾಜ್ಯದಲ್ಲಿ 50 ಲಕ್ಷ, ಕೋಟಿಯಷ್ಟಿದೆ ಎಂದು ಹೇಳುತ್ತಿದ್ದಾರೆ. ಈ ಸಂಖ್ಯೆಯನ್ನು ಕೇಳಿದರೆ ರಾಜ್ಯದ ಜನಸಂಖ್ಯೆ ಅಂದಾಜು 15 ಕೋಟಿಯಷ್ಟು ತಲುಪಲಿದೆ ಎಂದು ತೀಕ್ಷ್ಣವಾಗಿ ಸಚಿವರು ತಿಳಿಸಿದರು.
ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎನ್.ರವೀಂದ್ರನಾಥ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಯು.ವೆಂಕೋಬ, ಉಪ್ಪಾರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷ ಎನ್.ಸುನೀಲ್ ಕುಮಾರ್, ಪ್ರಾಧ್ಯಾಪಕ ಡಾ.ಸಂಗಮೇಶ್ ಎಸ್.ಗಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.