ಹಾಸನ, ಮೇ 5- ನಮ್ಮ ದೇಶದ 150 ಕೋಟಿ ಜನರು ಏಕಮುಖವಾಗಿ ಪ್ರಧಾನಮಂತ್ರಿಗಳ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮಕ್ಕೆ ನಿನ್ನೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಗ್ಗಟ್ಟಿದ್ದಾಗ ಮಾತ್ರ ಪಹಲ್ಲಾಮ್‌ನಂತಹ ದುರ್ಘಟನೆ ನಡೆಯುವುದಿಲ್ಲ ಎಂದಿದ್ದಾರೆ.
ಕಾಶ್ಮೀರದ ವಿಚಾರದಲ್ಲಿ ಪ್ರಧಾನಮಂತ್ರಿಗಳು ಬಹಳ ಬಿಗಿಯಾದಂತಹ ಕ್ರಮ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು ಐಕ್ಯತೆಯನ್ನು ತೋರಿಸಿವೆ. 28 ಪ್ರವಾಸಿಗರನ್ನು ನಿಷ್ಕರುಣೆಯಿಂದ ಹತ್ಯೆ ಮಾಡಿದಂತಹ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೂ ಪ್ರಧಾನಮಂತ್ರಿಗಳು ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ವಿಷಯದಲ್ಲಿ ನನ್ನ ಅನುಭವದಿಂದ ಅಭಿಪ್ರಾಯವನ್ನು ತಿಳಿಸಿದ್ದೇನೆ. ಇದು ಸೂಕ್ಷ್ಮವಾದ ವಿಚಾರ. ಈ ವಿಷಯದಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ನನ್ನದು, ನನ್ನ ಪಕ್ಷದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸೇರಿದಂತೆ ನಮ್ಮ ಪೂರ್ಣ ಬೆಂಬಲ ಇದೆ ಎಂದು ಈಗಾಗಲೇ ಹೇಳಿದ್ದೇನೆ.
ಮುಂದೆ ಕೂಡ ಏನು ಕ್ರಮ ತೆಗೆದುಕೊಳ್ಳುತ್ತಾರೋ ಆ ಕ್ರಮಕ್ಕೆ ಇಡೀ ದೇಶ ಪಕ್ಷಭೇದವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಬೆಂಬಲ ನೀಡಬೇಕು. ಮುಂದೆ ಇಂತಹ ದುಷ್ಕೃತ್ಯ ನಡೆಯಬಾರದು. ಅವರಿಗೆ ಪಾಠ ಕಲಿಸಬೇಕು ಎಂದು ಪ್ರಧಾನಮಂತ್ರಿಗಳು ಪ್ರತಿಜ್ಞೆ ಮಾಡಿದ್ದಾರೆ. ಅವರ ಹಿಂದೆ ನಿಲ್ಲುತ್ತೇವೆ. ಮೊದಲು ಕಾಂಗ್ರೆಸ್ ನಾಯಕರು ಸಹಮತವನ್ನು ವ್ಯಕ್ತಪಡಿಸಿದ್ದರು. ಮಧ್ಯೆ ಸ್ವಲ್ಪ ಒಡಕು ಶಬ್ದ ಬಂದ ಮೇಲೆ ಪುನಃ ಅವರು ಈ ವಿಷಯದಲ್ಲಿ ಐಕ್ಯತೆ ಬಗ್ಗೆ ಪುನಃ ಪ್ರತಿಪಾದನೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಾಸನ ತಾಲ್ಲೂಕಿನ ದ್ಯಾಪಲಾಪುರ ಗ್ರಾಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಗೌಡರು. ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನಾ ಮಹೋತ್ಸವ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.