ಬೆಂಗಳೂರು,ಮೇ 5– ಕನ್ನಡಿಗರ ವಿರುದ್ಧ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವ ಹಾಡುಗಾರ ಸೋನುನಿಗಮ್ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಈ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋನುನಿಗಂ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ ಸರ್ಕಾರದ ಪರವಾಗಿ ಹೇಳಿಕೆ ನೀಡುವಂತದ್ದೇನೂ ಇಲ್ಲ. ಸ್ಥಳೀಯ ಪೊಲೀಸರು ನಿಯಮಾನುಸಾರ ಕ್ರಮ ಕೈಗೊಳ್ಳುತ್ತಾರೆ ಎಂದರು.
ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲಾಗಿದೆ. ಇನ್ನೂ ಆರೇಳು ಜನ ಇರಬಹುದು ಎನ್ನಲಾಗುತ್ತಿದ್ದು, ಕೇಂದ್ರ ಸರ್ಕಾರ ವಾಪಸ್ ಕಳುಹಿಸುವ ದಿನಾಂಕವನ್ನು ವಿಸ್ತರಣೆ ಮಾಡಿದ್ದಾರೆ. ಅದರನುಸಾರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಹನಿಟ್ರ್ಯಾಪ್ ಪ್ರಕರಣವನ್ನು ಮುಚ್ಚಿಹಾಕುವಂತಹುದ್ದು ಏನೂ ಇಲ್ಲ, ಮಾಧ್ಯಮಗಳಲ್ಲಿ ಕೆಲ ವರದಿಗಳನ್ನು ನಾನು ಗಮನಿಸಿದ್ದೇನೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಿಐಡಿಗೆ ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅದರ ಮೇಲೆ ತನಿಖೆ ಮುಂದುವರೆಯುತ್ತದೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಸುಹಾಸ್‌ಶೆಟ್ಟಿ ಹತ್ಯೆಗೆ ವಿದೇಶದ ಲಿಂಕ್ ಇರುವ ಆರೋಪದ ಬಗ್ಗೆ ತನಿಖೆಯಿಂದಲೇ ಗೊತ್ತಾಗಬೇಕಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ಸಿಗುತ್ತದೆ. ಯಾರು ಸುಪಾರಿ ಕೊಟ್ಟಿದ್ದಾರೆ?, ಎಷ್ಟು ಕೊಟ್ಟಿದ್ದಾರೆ? ಎನ್ನುವುದನ್ನು ವಿಚಾರಣೆ ಮಾಡಲಾಗುವುದು. ಇಂತಹ ವಿಚಾರದಲ್ಲಿ ಊಹೆ ಮಾಡಿ ಮಾತನಾಡಲು ಸಾಧ್ಯವಿಲ್ಲ.
ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ಸಕಾರಣಗಳಿರುತ್ತವೆ. ಇದರಲ್ಲಿ ದ್ವೇಷ ರಾಜಕಾರಣ ಎನ್ನುವುದು ಸರಿಯಲ್ಲ. ಅವರು ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಶಾಸಕರ ವಿರುದ್ಧ ಪ್ರಕರಣ ದಾಖಲಿಸಬೇಕಾದರೆ ಪೊಲೀಸರು ಸಾಕಷ್ಟು ಪರಿಶೀಲನೆ ನಡೆಸಿರುತ್ತಾರೆ. ಅವರು ನೀಡಿರುವ ಹೇಳಿಕೆಯಲ್ಲಿ ಕಾನೂನು ವಿರುದ್ಧವಾದ ಅಂಶವಿರಬಹುದು ಎಂದು ಸಮರ್ಥಿಸಿಕೊಂಡರು.
ಸುಹಾಸ್ ಶೆಟ್ಟಿ ವಿರುದ್ಧ ರೌಡಿಶೀಟರ್‌ಗೆ ಸಂಬಂಧಪಟ್ಟಂತಹ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಹಾಗಿದ್ದ ಮೇಲೆ ಆತನನ್ನು ರೌಡಿಶೀಟರ್ ಎಂದೇ ಕರೆಯಲಾಗುವುದು. ಬಿಜೆಪಿಯವರು ಇದಕ್ಕೆ ಆಕ್ಷೇಪಿಸುವುದು ಯಾವ ಕಾರಣಕ್ಕೆ ಎಂದು ಪರಮೇಶ್ವರ್ ಪ್ರಶ್ನಿಸಿದರು. ಸುಹಾಸ್ ಶೆಟ್ಟಿ ಕೊಲೆ ನಂತರ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಪೋಸ್ಟ್‌ಗಳು ಬರುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಎಡಿಜಿಪಿಯವರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.