Tuesday, May 6, 2025
Homeರಾಜ್ಯಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಹಕರಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ

ಪರಿಶಿಷ್ಟ ಜಾತಿಗಳ ಸಮೀಕ್ಷೆಗೆ ಸಹಕರಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ

CM Siddaramaiah appeals to cooperate in the survey of Scheduled Castes

ಬೆಂಗಳೂರು ಮೇ 5– ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಸಮರ್ಪಕ ದತ್ತಾಂಶ ಸಂಗ್ರಹಿಸಲು ಇಂದಿನಿಂದ ಮನೆ ಮನೆ ಸಮೀಕ್ಷೆ ನಡೆಯುತ್ತಿದ್ದು, ಸಮುದಾಯಗಳು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಕುರಿತಂತೆ ವಿಧಾನಸೌಧದ ಸಮೇಳನ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌‍ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಒಳಮೀಸಲಾತಿ ಜಾರಿಗೆ ನಮ ಸರ್ಕಾರ ಬದ್ಧವಾಗಿದೆ. ಈ ದಿಕ್ಕಿನಲ್ಲಿ ಇಂದಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದರು.

ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ನಡುವೆ ಮೀಸಲಾತಿಯನ್ನು ವೈಜ್ಞಾನಿಕವಾಗಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್‌ ಕಳೆದ ವರ್ಷ ಆಗಸ್ಟ್‌ 1ರಂದು ನೀಡಿರುವ ತೀರ್ಪಿನಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ನಮ ಸರ್ಕಾರ ರಚನೆ ಮಾಡಿದೆ. ಆಯೋಗ ಈಗಾಗಲೇ ಮಧ್ಯಂತರ ವರದಿ ನೀಡಿ, ಸಮರ್ಪಕ ದತ್ತಾಂಶ ಸಂಗ್ರಹಿಸುವ ಅಗತ್ಯವಿದೆ ಎಂದು ಹೇಳಿದೆ. ಹಲವು ಸಮುದಾಯಗಳ ಸಂಘಟನೆಗಳು ಇದೇ ಅಭಿಪ್ರಾಯವನ್ನು ಹೇಳಿವೆ.

ಈ ಮೊದಲು 2011ರ ಜನಗಣತಿ ಆಧಾರದಲ್ಲಿ ಸದಾಶಿವ ಆಯೋಗ ಪರಿಶಿಷ್ಟ ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಗುರುತಿಸಿತ್ತು. ಅದರಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಸಮುದಾಯದಲ್ಲಿ ಯಾರು, ಎಷ್ಟು ಮಂದಿ ಇದ್ದಾರೆ ಎನ್ನುವುದು ಸ್ಪಷ್ಪವಾಗಿಲ್ಲ.

ಎಡಗೈ, ಬಲಗೈ ಸಮುದಾಯದವರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂಬ ವರ್ಗವನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತಿದ್ದಾರೆೆ. ಗೊಂದಲಗಳನ್ನು ನಿವಾರಿಸಲು ಮೂಲ ಜಾತಿಯನ್ನು ಕರಾರುವಾಕ್ಕಾಗಿ ತಿಳಿಯಲು ಇಂದಿನಿಂದ ಮೇ 17ರವರೆಗೆ ಮನೆ ಮನೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಮೊದಲ ಹಂತದ ಸಮೀಕ್ಷೆಗೆ ಸುಮಾರು 65 ಸಾವಿರ ಶಿಕ್ಷಕರನ್ನು ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರುತ್ತಾರೆ ಎಂದರು.

ಎರಡನೇ ಹಂತದಲ್ಲಿ ಮೇ 19ರಿಂದ 21ರ ನಡುವೆ ವಿಶೇಷ ಶಿಬಿರಗಳಲ್ಲಿ ಮಾಹಿತಿ ಕಲೆ ಹಾಕಲಾಗುವುದು. 3ನೇ ಹಂತದಲ್ಲಿ ಮೇ 19ರಿಂದ 22 ರವರೆಗೆ ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಮಾಹಿತಿ ನೀಡಲು ಸಾಧ್ಯವಾಗದವರು ಎರಡು ಹಾಗೂ ಮೂರನೇ ಹಂತದಲ್ಲಿ ಮಾಹಿತಿ ನೀಡಬಹುದಾಗಿ ಎಂದರು.

ಮೊಬೈಲ್‌ ಆ್ಯಪ್‌ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6.30 ರಿಂದ ಸಂಜೆ 6.30ರವರೆಗೆ ಮೊಬೈಲ್‌ ಆ್ಯಪ್‌ ಎನೇಬಲ್‌ ಮಾಡಲಾಗಿರುತ್ತದೆ. ದಿನದ 24 ಗಂಟೆಗೂ ಸಕ್ರಿಯವಾಗಿರುವ ಹೆಲ್ಪ್ ಲೈನ್‌ ನಂಬರ್‌ 94813 59000 ಅನ್ನು ಇದಕ್ಕಾಗಿ ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಿಖರ ದತ್ತಾಂಶ ಸಂಗ್ರಹಿಸಿ, ಒಳ ಮೀಸಲಾತಿ ಕುರಿತು ವರದಿ ನೀಡಲು ಆಯೋಗಕ್ಕೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ವರದಿ ಸಲ್ಲಿಕೆಯಾದ ತಕ್ಷಣವೇ ಸರ್ಕಾರ ಒಳಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳಲಿದೆ. ಕಾಂಗ್ರೆಸ್‌‍ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ನುಡಿದಂತೆ ನಡೆಯುತ್ತಿದೆ. ಒಳ ಮೀಸಲಾತಿಗೆ ಸಂಪುಟದ ಎಲ್ಲಾ ಸಚಿವರು ಒಪ್ಪಿದ್ದಾರೆ. ಯಾರ ನಡುವೆಯೂ ಭಿನ್ನ ಅಭಿಪ್ರಾಯಗಳಿಲ್ಲ ಎಂದರು.

ಹಿಂದುಳಿದ ವರ್ಗಗಳ ಕಾಂತರಾಜು ಆಯೋಗದ ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಒಳ ಮೀಸಲಾತಿಗಾಗಿ ಮಾತ್ರ ಇಂದಿನಿಂದ ಗಣತಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ.ಮಹದೇವಪ್ಪ ಮಾತನಾಡಿ, ಇದೊಂದು ಐತಿಹಾಸಿಕ ಸಮೀಕ್ಷೆಯಾಗಿದೆ. ಸುಮಾರು 100 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ.

ಪರಿಶಿಷ್ಟ ಜಾತಿಗಳ ಎಲ್ಲ ಉಪಜಾತಿಗಳು ಒಟ್ಟಾಗಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸಲು ಬದ್ಧತೆ ಪ್ರದರ್ಶಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದರು. ಹಲವು ದಶಕಗಳ ಬೇಡಿಕೆ ಈಗ ಈಡೇರುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈ ರೀತಿಯ ಸಮೀಕ್ಷೆಗಳು ನಡೆದು ವಿಧಾನಸಭೆಯಲ್ಲಿ ಮಂಡನೆಯಾಗಿವೆ. ನಮಲ್ಲೂ ನಾಗಮೋಹನ್‌ ದಾಸ್‌‍ ವರದಿಯನ್ನು ವಿಧಾನಸೌಧದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಕೃಷಿ ಮಾರುಕಟ್ಟೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಶಾಸಕರಾದ ರೂಪಶಶಿಕಲಾ, ವಿಧಾನ ಪರಿಷತ್‌ ಸದಸ್ಯರಾದ ಸುಧಾಮದಾಸ್‌‍, ನಸೀರ್‌ ಅಹಮದ್‌ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

Latest News