ಬೆಂಗಳೂರು,ಮೇ 5– ವರದಕ್ಷಿಣೆ ವಿಚಾರವಾಗಿ ದಂಪತಿ ನಡುವೆ ಜಗಳವಾಗಿ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಗಣಪತಿ ನಗರದ 2ನೇ ಮುಖ್ಯ ರಸ್ತೆ, 1ನೇ ಹಂತದ ನಿವಾಸಿ ಲೋಕೇಶ್ಕುಮಾರ್ ಗೆಹ್ಲೋಟ್ ಅಲಿಯಾಸ್ ಲಲಿತ್ (43) ಬಂಧಿತ ಆರೋಪಿ.ಲೋಕೇಶ್ ಕುಮಾರ್ ಹಾಗೂ ನಮಿತಾ ದಂಪತಿಗೆ ಒಂದು ಮಗುವಿದ್ದು, ಮಹಾಗಣಪತಿ ನಗರದಲ್ಲಿ ವಾಸವಿದ್ದಾರೆ.ಲೋಕೇಶ್ ಕುಮಾರ್ ನಗರದ ಕಬ್ಬನ್ ಪೇಟೆಯಲ್ಲಿ ಕಲರ್ರಸ ಡಿಜಿಟಲ್ ಪೋಟೋ ಸ್ಟೂಡಿಯೋ ಇಟ್ಟುಕೊಂಡಿದ್ದು, ಅದನ್ನು ಅಭಿವೃದ್ದಿ ಪಡಿಸಬೇಕು ಅಲ್ಲದೇ ನಗರದಲ್ಲಿ ಸೈಟ್ ಖರೀದಿ ಮಾಡಬೇಕು ಎಂದು ಪತ್ನಿಯಿಂದ 60 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದನು.
ಅಲ್ಲದೇ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಆಗಾಗೇ ಪತ್ನಿಗೆ ಪೀಡಿಸುತ್ತಿದ್ದನು. ಇದೇ ವಿಚಾರವಾಗಿ ಮನೆಯಲ್ಲಿ ಕಳೆದ 15 ದಿನಗಳಿಂದ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಯಾಗುತಿತ್ತು.ಏಪ್ರಿಲ್ 24 ರಂದು ಸಂಜೆ 5 ಗಂಟೆ ಸುಮಾರಿಗೆ ಲೋಕೇಶ್ ಕುಮಾರ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾನೆ. ಸಂಜೆ 6 ಗಂಟೆ ಸುಮಾರಿನಲ್ಲಿ ನಮಿತಾ ಅವರ ಸಹೋದರ ಸತ್ಯಂ ಎಂಬುವವರು ಲೋಕೇಶ್ ಕುಮಾರ್ಗೆ ಕರೆ ಮಾಡಿದ್ದಾರೆ.
ಆ ವೇಳೆ ನಮಿತಾ, ಯಾರು ಪೋನ್ ಮಾಡಿರುವುದು ಲೌಡ್ ಸ್ಪೀಕರ್ ಇಟ್ಟು ಮಾತನಾಡುವಂತೆ ಪತಿಗೆ ಹೇಳಿದಾಗ ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದಾಗ ಮಾತಿಗೆ ಮಾತು ಬೆಳೆದಿದೆ.
ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಆರೋಪಿ ಲೋಕೇಶ್ಕುಮಾರ್ ಪತ್ನಿಯನ್ನು ಕೆಳಗೆ ಕೆಡವಿ ಆಕೆಯ ಮೇಲೆ ಕುಳಿತುಕೊಂಡು ಕೈಗಳಿಂದ ಕುತ್ತಿಗೆಯನ್ನು ಬಲವಾಗಿ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮನೆಯ ಮಾಲೀಕರಾದ ಭುಪೆಂಧರ್ ಎಂಬುವವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಸುದ್ದಿತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಲೋಕೇಶ್ಕುಮಾರ್ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್ ಅವರ ನಿರ್ದೇಶನದ ಮೇರೆಗೆ, ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾರ್ ಅವರ ಸಲಹೆ ಮೇರೆಗೆ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂ ಸುವಲ್ಲಿ ಯಶಸ್ವಿಯಾಗಿದೆ.ಇವರ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಶ್ಲಾಘಿಸಿದ್ದಾರೆ.