ಬಿಕಾಂ ಪದವೀಧರ ಸಾವು
ಬೆಂಗಳೂರು,ಮೇ 5- ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಿಕಾಂ ಪದವೀಧರ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.ಮನೋರಾಯನ ಪಾಳ್ಯದ ನಿವಾಸಿ ಸಯಾನ್ ಪ್ರಭಾತ್ (21) ಮೃತಪಟ್ಟ ಬಿಕಾಂ ಪದವೀಧರ.
ಸ್ನೇಹಿತನ ಮನೆಗೆ ಹೋಗಿ ಇಂದು ಮುಂಜಾನೆ 1.30ರ ಸುಮಾರಿನಲ್ಲಿ ಸಯಾನ್ ಪ್ರಭಾತ್ ತನ್ನ ದ್ವಿಚಕ್ರವಾಹದಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾಗ ರಿಂಗ್ ರಸ್ತೆಯ ಲುಂಬಿನಿ ಲೇಕ್ ಬಳಿ ಅತೀ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಸುದ್ದಿ ತಿಳಿದು ಹೆಬ್ಬಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅತೀ ವೇಗ -ಉರುಳಿದ ಬೈಕ್, ಖಾಸಗಿ ಕಂಪನಿ ನೌಕರ ಸಾವು
ಬೈಕ್‌ನಲ್ಲಿ ಅತೀ ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಖಾಸಗಿ ಕಂಪನಿ ನೌಕರ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ನಡೆದಿದೆ.
ಕಾಳೇನ ಅಗ್ರಹಾರದಲ್ಲಿ ವಾಸವಾಗಿದ್ದ ಶ್ರೀಶೈಲ (36) ಮೃತಪಟ್ಟ ನೌಕರ. ಇವರು ಮೂಲತಃ ಬೆಳಗಾವಿ ಜಿಲ್ಲೆಯವರು.ಶ್ರೀಶೈಲ ಅವರು ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಬೇಗೂರು-ಕೊಪ್ಪ ರಸ್ತೆಯ ಮೈಲಸಂದ್ರ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಶ್ರೀಶೈಲ ಅವರನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.