ನವದೆಹಲಿ, : ಪೆಹಲ್ಗಾಮ್ ನರಮೇಧದ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಪರಿಸ್ಥಿತಿ ಕೈ ಮೀರಿರುವ ಬೆನ್ನಲ್ಲೇ ನಾಳೆ ದೇಶದಾದ್ಯಂತ ಬರೋಬ್ಬರಿ 54 ವರ್ಷದ ಬಳಿಕ ಅಣಕು ತಾಲೀಮು (ಮಾಕ್ ಡ್ರಿಲ್) ನಡೆಯಲಿದೆ. ಇದು ನೆರೆಯ ರಾಷ್ಟ್ರದ ವಿರುದ್ಧ ಯುದ್ಧಕ್ಕೆ ಮುನ್ಸೂಚನೆ ಎಂದೇ ಹೇಳಲಾಗಿದೆ.
ಪಹಲ್ಯಾಮ್ ಪ್ರತೀಕಾರಕ್ಕೆ ಭಾರತ ಸನ್ನದ್ಧವಾಗುತ್ತಿದ್ದಂತೆ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಯುದ್ಧದ ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕೆ ಕೊಡುವಂತೆ ಸಿವಿಲ್ ಡಿಫೆನ್ಸ್ ಗಳಿಗೆ ಸೂಚನೆ ನೀಡಲಾಗಿದೆ. ಈ ಅಣಕು ಕವಾಯತು ಭಾರತಾದ್ಯಂತ ವ್ಯಾಪಕವಾಗಲಿದೆ ಎಂದು ನಾಗರಿಕ ರಕ್ಷಣಾ ಮಹಾ ನಿರ್ದೇಶಕ ವಿವೇಕ್ ಶ್ರೀವಾಸ್ತವ ಹೇಳಿದ್ದಾರೆ.
ಅಪಾಯದ ವೇಳೆ ವಾಯುದಾಳಿಯ ಎಚ್ಚರಿಕೆ ಸೈರನ್ (ಸದ್ದು) ಅರಿತುಕೊಳ್ಳುವುದು, ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರಿಗೆ ತರಬೇತಿ ನೀಡುವಂತೆಯೂ ಕೇಂದ್ರ ಹೇಳಿದೆ. ಇದರ ಜೊತೆಗೆ, ಪ್ರಮುಖ ಸ್ಥಾವರಗಳ ರಕ್ಷಣೆ, ಅವುಗಳ ಮರೆಮಾಚುವಿಕೆ, ಸ್ಥಳಾಂತರ ಮತ್ತು ಅಪಾಯದ ವೇಳೆ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಪೂರ್ವಾಭ್ಯಾಸ ನಡೆಸಲೂ ತಿಳಿಸಿದೆ.
1971 ರಲ್ಲಿ ಸಮರಾಭ್ಯಾಸ ನಡೆಸಿದ್ದ ದೇಶ:
ಪಹಲ್ಟಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್ ನಡೆಸಲು ಸೂಚನೆ ನೀಡಲಾಗಿದೆ. ಇದಕ್ಕೂ ಮೊದಲು ಅಂದರೆ 1971 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದಿದ್ದ ಯುದ್ಧದ ವೇಳೆ ಇದೇ ರೀತಿಯ ಸೂಚನೆ ನೀಡಲಾಗಿತ್ತು.
ಉಭಯ ರಾಷ್ಟ್ರಗಳ ನಡುವೆ ನಡೆದ ಅಂದಿನ ಯುದ್ದಕ್ಕೂ ಮೊದಲು ದೇಶದ ನಾಗರಿಕರ ರಕ್ಷಣೆಗಾಗಿ ಪೂರ್ವ ತಯಾರಿ ನಡೆಸಲು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಲಾಗಿತ್ತು. ಅಂದಿನ ಯುದ್ಧದಲ್ಲಿ ಪಾಕಿಸ್ತಾನವು ಭಾರತದ ಮುಂದೆ ಮಂಡಿಯೂರಿತ್ತು. ಇತ್ತ ಬಾಂಗ್ಲಾದೇಶವು ವಿಮೋಚನೆ ಹೊಂದಿತ್ತು.
ಸಾಧಾರಣವಾಗಿ ಒಂದು ದೇಶ ಯುದ್ಧಕ್ಕೆ ಸಿದ್ದಗೊಳ್ಳುತ್ತಿದ್ದಾಗ ಮಾಕ್ ಡ್ರಿಲ್ ಮಾಡಲು ಕರೆ ನೀಡುತ್ತದೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಮೊದಲು ರಕ್ಷಣಾ ಮಾಕ್ ಡ್ರಿಲ್ ನಡೆದಿತ್ತು. ಕಳೆದ ಭಾನುವಾರ ಪಂಜಾಬ್‌ನ ಫಿರೋಜ್ ಪುರ್ ಕಂಟೋನ್ಸೆಂಟ್‌ನಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್ ದೀಪ ಆರಿಸಿ ಮಾಕ್ ಡ್ರಿಲ್ ನಡೆದಿತ್ತು. ಇದರ ಬೆನ್ನಲ್ಲೇ ಎಲ್ಲ ರಾಜ್ಯಗಳಿಗೆ ಮಾಕ್ ಡ್ರಿಲ್‌ಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
1971ರ ಸಂದರ್ಭದಲ್ಲೂ ಮೊದಲಿಗೆ ಪಂಜಾಬ್‌ನಲ್ಲೇ ಮೊದಲ ಬಾರಿ ಮಾಕ್ ಡ್ರಿಲ್ ಮಾಡಲಾಗಿತ್ತು. ಈ ಬಾರಿಯೂ ಮೊದಲು ಪಂಜಾಬ್ ನಲ್ಲಿ ನಡೆಸಿ ಬಳಿಕ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವುದು ವಿಶೇಷ. ಹೀಗಾಗಿ 1971 ರೀತಿ ಮತ್ತೊಮ್ಮೆ ಭಾರತ ಪಾಕ್ ಮಧ್ಯೆ ಯುದ್ಧ ನಡೆಯುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
ಮಾಕ್ ಡ್ರಿಲ್ ಎಂದರೇನು?
ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯ ಸೃಷ್ಟಿ ಮಾಡಲಾಗುತ್ತದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವ ಅಭ್ಯಾಸ ಇದಾಗಿದ್ದು ನೈಜ ಘಟನೆಯಂತೆಯೇ ನಡೆಯುತ್ತದೆ. ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಸಂಕಷ್ಟದ ಸನ್ನಿವೇಶಗಳನ್ನು ಆಣಕುಪ್ರದರ್ಶನ ಮಾಡಿ ಅಭ್ಯಾಸ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ, ಜನರ ರಕ್ಷಣೆಯ ಸಾಮರ್ಥ್ಯ ಬಲಪಡಿಸುವ ಉದ್ದೇಶದ ಜೊತೆಗೆ ಶತ್ರು ದಾಳಿ ವೇಳೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿ ಪಡಿಸಲು ಅಗತ್ಯ ಸಿದ್ಧತೆ ಮಾಡಲು ಈ ಅಭ್ಯಾಸ ಮಾಡಲಾಗುತ್ತದೆ.
ಯಾವುದೇ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು, ಪೊಲೀಸ್, ಆರೋಗ್ಯ ಇಲಾಖೆ ಮತ್ತು ಇತರ ಸಂಸ್ಥೆಗಳ ಸಮನ್ವಯ ಬೇಕಾಗುತ್ತದೆ. ಜನರಲ್ಲಿ ತುರ್ತು ಸನ್ನಿವೇಶದ ಬಗ್ಗೆ ಜಾಗೃತಿ ಮೂಡಿಸಿ ಸುರಕ್ಷಿತವಾಗಿರಲು ತರಬೇತಿ ನೀಡಲಾಗುತ್ತದೆ. ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವೇಳೆ ಈ ರೀತಿಯ ಮಾಕ್ ಡ್ರಿಲ್ ನಡೆದಿರಲಿಲ್ಲ. ಈ ಸಂದರ್ಭದಲ್ಲಿ ಪಾಕಿಸ್ತಾನವೇ ನೇರವಾಗಿ ಯುದ್ಧಕ್ಕೆ ಧುಮುಕಿದ್ದರಿಂದ ಮಾಕ್ ಡ್ರಿಲ್ ಮಾಡಲು ಸಮಯ ಸಿಕ್ಕಿರಲಿಲ್ಲ.
ಅಣಕು ಡ್ರಿಲ್ ಏನನ್ನು ಒಳಗೊಂಡಿದೆ?
ನಾಗರಿಕ ರಕ್ಷಣೆಯನ್ನು ನಾಗರಿಕ ರಕ್ಷಣಾ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಆಒ) ಅಥವಾ ಜಿಲ್ಲಾಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ನಾಗರಿಕ ರಕ್ಷಣೆಗಾಗಿ ನೋಡಲ್ ಅಧಿಕಾರಿಯನ್ನು ನಿಯೋಜಿಸುತ್ತಾರೆ.
ಬುಧವಾರದಿಂದ ಪ್ರಾರಂಭಿಸಿ, ಡಿಎಂಗಳು ನಾಗರಿಕ ರಕ್ಷಣಾ ಸ್ವಯಂಸೇವಕರ ಪಟ್ಟಿಯನ್ನು ಮರುಪರಿಶೀಲಿಸುತ್ತಾರೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ಸಿದ್ಧಪಡಿಸಲಾಗುವ ಸಂಪರ್ಕ ಸಂಖ್ಯೆಗಳು ಮತ್ತು ಹೆಸರುಗಳನ್ನು ನವೀಕರಿಸುತ್ತಾರೆ. ಭಾರತದಾದ್ಯಂತ ದುರ್ಬಲ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಬುಧವಾರ ಜಿಲ್ಲಾಧಿಕಾರಿಗಳು ಡ್ರಿಲ್ ನೇತೃತ್ವ ವಹಿಸಲಿದ್ದಾರೆ.
ವಾಯುದಾಳಿಯ ಎಚ್ಚರಿಕೆ ಸೈರನ್‌ಗಳು
ಈ ಸಮರಾಭ್ಯಾಸದ ಪ್ರಮುಖ ಅಂಶವೆಂದರೆ ವಾಯುದಾಳಿ ಎಚ್ಚರಿಕೆ ವ್ಯವಸ್ಥೆಯ ಪರಿಶೀಲನೆ, ತುರ್ತು ಪರಿಸ್ಥಿತಿಯಲ್ಲಿ ನಾಗರಿಕರಿಗೆ ಎಚ್ಚರಿಕೆ ನೀಡುವ ಮೊದಲ ಹೆಜ್ಜೆ ಇದು. ವಾಯುಪಡೆಯು ಎಚ್ಚರಿಕೆಯನ್ನು ನೀಡುತ್ತದೆ ಮತ್ತು ಪ್ರತಿಯೊಂದು ಜಿಲ್ಲೆಯು ತನ್ನ ವಾಯುದಾಳಿ ಎಚ್ಚರಿಕೆ ಸೈರನ್ ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ನಾಗರಿಕ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಮುಂಚೂಣಿ ಪ್ರದೇಶಗಳಲ್ಲಿ, ಮುಂದಿನ ಹಂತವು ನಾಗರಿಕರು ಸಂರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆಯುವುದನ್ನು ಒಳಗೊಂಡಿರುತ್ತದೆ. ಕಾಶ್ಮೀರದ ಉರಿಯಂತಹ ಮುಂಚೂಣಿ ಪ್ರದೇಶಗಳು (ಯುದ್ಧ ನಡೆದರೆ ಮುಂಚೂಣಿಗೆ ಹತ್ತಿರವಿರುವ ಪ್ರದೇಶಗಳು) ಈಗಾಗಲೇ ಸಮುದಾಯ ಬಂಕರ್‌ಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿವೆ.
ತುರ್ತು ಸಂದರ್ಭಗಳಲ್ಲಿ ಸ್ಥಳಾಂತರಿಸಲು ಅನಿವಾರ್ಯದಂತಹ ಅಂತಾರಾಷ್ಟ್ರೀಯ ಗಡಿಯಲ್ಲಿರುವ ವಿದ್ಯಾರ್ಥಿಗಳು ಈಗಾಗಲೇ ಅಣಕು ಕವಾಯತುಗಳನ್ನು ಅಭ್ಯಾಸ ಮಾಡಿದ್ದಾರೆ.
ಕೇಂದ್ರದ ಸೂಚನೆಗಳು:
ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ
ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರಿಗೆ ರಕ್ಷಣಾ ಕುರಿತು ತರಬೇತಿ:
ಕ್ಯಾಶ್ ಬ್ಲ್ಯಾಕೌಟ್ ಕ್ರಮಗಳನ್ನು ಒದಗಿಸುವುದು
ಪ್ರಮುಖ ಸ್ಥಾವರಗಳು, ಅಣೆಕಟ್ಟುಗಳ ಬಗ್ಗೆ ಎಚ್ಚರ
ಸ್ಥಳಾಂತರಿಸುವ ಯೋಜನೆಯ ನವೀಕರಣ ಮತ್ತು ಅದರ ಪೂರ್ವಾಭ್ಯಾಸ