ಬೆಂಗಳೂರು, ಮೇ 6-ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತಿಂಗಳಾದ ಏಪ್ರಿಲ್ ನಲ್ಲಿ 8560.86 ಕೋಟಿ ರೂ. ಮಾತ್ರ ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚು ಇಳಿಕೆಯಾಗಿರುವುದು ಕಂಡುಬಂದಿದೆ.
ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಕಳೆದ 2024ರ ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ 7677.87 ಕೋಟಿ ರೂ., ಕರ್ನಾಟಕ ಮಾರಾಟ ತೆರಿಗೆ 1811.32 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 173.61 ಕೋಟಿ ರೂ. ಸೇರಿ ಒಟ್ಟು 9662.80 ಕೋಟಿ ರೂ. ಸಂಗ್ರಹವಾಗಿತ್ತು.
ಆದರೆ, 2025ರ ಏಪ್ರಿಲ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ 6360.26 ಕೋಟಿ ರೂ.. ಕರ್ನಾಟಕ ಮಾರಾಟ ತೆರಿಗೆ 2001.12 ಕೋಟಿ ರೂ. ಹಾಗೂ ವೃತ್ತಿ ತೆರಿಗೆ 199.48 ಕೋಟಿ ರೂ. ಸೇರಿ ಒಟ್ಟು 8560.86 ಕೋಟಿ ರೂ. ಸಂಗ್ರಹವಾಗಿದೆ.
ಇದರಿಂದ ಕಳೆದ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ 1101.94 ಕೋಟಿ ರೂ.ನಷ್ಟು ಕಡಿಮೆ ಸಂಗ್ರಹವಾಗಿದೆ. ಆದರೆ, ಕರ್ನಾಟಕ ಮಾರಾಟ ತೆರಿಗೆ ಮತ್ತು ವೃತ್ತಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ 1317.61 ಕೋಟಿ ರೂ.ನಷ್ಟು ಇಳಿಕೆಯಾಗಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಈ ಮೂರು ತೆರಿಗೆ ಸೇರಿ ಒಟ್ಟು 102585.52 ಕೋಟಿ ರೂ.ನಷ್ಟು ಸಂಗ್ರಹವಾಗಿತ್ತು.