ಬೆಂಗಳೂರು, ಮೇ 6- ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದ ನಗರದ ವಿವಿಧ ಪ್ರದೇಶಗಳಲ್ಲಿ 5,35,815 ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ದಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
2024ರ ಜನವರಿಯಲ್ಲಿ ನಗರದಲ್ಲಿ ಕೇವಲ 2.32 ಲಕ್ಷ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆ ಸಂದರ್ಭದಲ್ಲಿ ನಗರದಲ್ಲಿರುವ ಸಿಸಿ ಕ್ಯಾಮೆರಾಗಳ ಸಂಖ್ಯೆಯನ್ನು 5 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿತ್ತು. ಅದರಂತೆ 2025ರ ಏಪ್ರಿಲ್ 30ರ ತನಕ 5.35 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದರ ಜೊತೆಗೆ ನಗರದಲ್ಲಿ ಅಳವಡಿಸಲಾಗಿರುವ 5,35,815 ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸುವಲ್ಲಿಯೂ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿಗೆ ಪ್ರತಿನಿತ್ಯ ದೇಶ ವಿದೇಶಗಳ ಹಲವಾರು ಗಣ್ಯರು ಭೇಟಿ ನೀಡುತ್ತಿರುವುದರಿಂದ ನಗರದಲ್ಲಿ ಸಾರ್ವಜನಿಕ ಭದ್ರತೆ ಮತ್ತು ಅಪರಾಧ ನಿಯಂತ್ರಣ ಮಾಡುವ ಉದ್ದೇಶದಿಂದ ಮೋಬೈಲ್ ಕಂಪೆನಿಯನ್ ಫಾರ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್(ಎಂಸಿಸಿಟಿಎನ್‌ಎಸ್) ಯೋಜನೆಯಡಿ ನಗರದಲ್ಲಿರುವ ಎಲ್ಲಾ ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಲು ತೀರ್ಮಾನಿಸಲಾಗಿತ್ತು.
2024 ರಲ್ಲಿ ಕೇವಲ 2.32 ಲಕ್ಷ ಸಿಸಿ ಕ್ಯಾಮೆರಾಗಳನ್ನು ಮಾತ್ರ ಜಿಯೋ ಟ್ಯಾಗಿಂಗ್ ಮಾಡಲಾಗಿತ್ತು. ಇದೀಗ ನಾವು ಕೇವಲ ಒಂದು ವರ್ಷದಲ್ಲೇ ಮೂರು ಲಕ್ಷಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ದಾಖಲೆ ಬರೆದಿದ್ದೇವೆ ಎಂದು ಅವರು ಹೇಳಿದರು.
ಜಿಯೋ ಟ್ಯಾಗಿಂಗ್ ಆಗಿರುವ ಸಿಸಿ ಕ್ಯಾಮೆರಾಗಳನ್ನು ನಾವು ವಿವಿಧ ಕ್ಷೇತ್ರಗಳು, ವಸತಿ ಪ್ರದೇಶಗಳು, ವ್ಯಾಪಾರ ಕೇಂದ್ರಗಳು, ಮುಖ್ಯರಸ್ತೆಗಳು, ಸಿಗ್ನಲ್‌ಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬ್ಯಾಂಕ್‌ಗಳು ಹಾಗೂ ಇತರ ಜನನಿಬಿಡ ಪ್ರದೇಶಗಳಲ್ಲಿ ಅಳವಡಿಸಿರುವುದರಿಂದ ಯಾವುದೇ ಅಪರಾಧ ಪ್ರಕರಣಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜಿಯೋ ಟ್ಯಾಗಿಂಗ್ ವ್ಯವಸ್ಥೆಯಿಂದ ಪೊಲೀಸರಿಗೆ ಅಪರಾಧ ನಡೆಯುವ ಸ್ಥಳದ ನಿಖರ ಮಾಹಿತಿ ದೊರೆಯುವುದರಿಂದ ಅದಷ್ಟು ಬೇಗ ತನಿಖೆ ನಡೆಸಿ ಆರೋಪಿಗಳಿಗೆ ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತದೆ ಎಂದು ಆಯುಕ್ತರು ವಿವರಣೆ ನೀಡಿದರು.
ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳನ್ನು ನಾವು ಎಂಸಿಸಿಟಿಎನ್‌ಎಸ್ ಯೋಜನೆಯಡಿ ಜಿಯೋ ಟ್ಯಾಗಿಂಗ್ ಮಾಡಿರುವುದರಿಂದ ಭವಿಷ್ಯದಲ್ಲಿ ಸಾರ್ಟ್ ಪ್ಯಾಟ್ರೋಲಿಂಗ್, ಡಿಜಿಟಲ್ ನಗರ ಭದ್ರತಾ ವ್ಯವಸ್ಥೆ ಮತ್ತು ವಿಶ್ಲೇಷಣಾ ತನಿಖಾ ಯೋಜನೆಗಳಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಇದೆಲ್ಲದರ ಜೊತೆ ನಾವು ಪೊಲೀಸ್ ಇಲಾಖೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡು ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಲು ಬದ್ಧರಾಗಿರುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಆಯುಕ್ತರು ಭರವಸೆ ನೀಡಿದರು.