ಬೆಂಗಳೂರು, ನ.11- ಎಲ್ಲಾ ಪಕ್ಷಗಳು ಮೂರು ಗುಂಪು ಇದ್ದೆ ಇರುತ್ತದೆ. ಒಂದನ್ನು ಸಮಾಧಾನ ಮಾಡಿದರೆ ಉಳಿತ ಎರಡು ಗುಂಪುಗಳು ದೂರ ಹೋಗುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಸ್ ಜಾರಕಿಹೊಳಿ ಹೇಳಿದರು. ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ಬೆನ್ನಲ್ಲಿ ಕಂಡು ಬರುತ್ತಿರುವ ಭಿನ್ನಮತಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಹಜ ಬೆಳವಣಿಗೆ ಎಲ್ಲಾ ಪಕ್ಷದಲ್ಲೂ ಇರುತ್ತದೆ. ಅಂತಹದ್ದನ್ನು ಸರಿದೂಗಿಸುವ ಸಾಮಥ್ರ್ಯ ಅಧ್ಯಕ್ಷರಾಗಿರುವವರಿಗೆ ಇರಬೇಕು ಎಂದರು. ವಿಜಯೆಂದ್ರರನ್ನು ರಾಜ್ಯಾಧ್ಯಕ್ಷರನ್ನು ಮಾಡುವುದು ಬಿಜೆಪಿಗೆ ಅನಿವಾರ್ಯವಾಗಿತ್ತು.
ಒಂದೆಡೆ ಮತಬ್ಯಾಂಕ್ ಆಗಿರುವ ಲಿಂಗಾಯಿತ ಸಮುದಾಯವನ್ನು ಓಲೈಸಿಕೊಳ್ಳಬೇಕಿತ್ತು, ಮತ್ತೊಂದೆಡೆ ಯಡಿಯೂರಪ್ಪರನ್ನು ಉಳಿಸಿ ಕೊಳ್ಳಬೇಕಿತ್ತು. ಅದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಈ ಹಿಂದೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಿದ ಕಾರಣಕ್ಕೆ ಬಿಜೆಪಿ ಸೋಲು ಕಂಡಿತ್ತು. ಯಡಿಯೂರಪ್ಪ ಇದ್ದರೆ 100 ಸ್ಥಾನಗಳ ಹತ್ತಿರ ಬರುತ್ತದೆ, ಇಲ್ಲವಾದರೆ 60ಕ್ಕೆ ಕುಸಿಯುತ್ತದೆ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಹಾಗೇ ಆಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ತಾವು ಹೊಂದಾಣಿಕೆಯಾಗುವ ಸಾಧ್ಯತೆಯೇ ಇಲ್ಲ, ಅಂತಹದ್ದೇನು ನಡೆದೆ ಇಲ್ಲ. ಡಿ.ಕೆ.ಸುರೇಶ್ ನಮ್ಮ ಮನೆಗೆ ಅನೇಕ ಬಾರಿ ಬಂದಿದ್ದಾರೆ. ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಮೊನ್ನೆ ಡಿ.ಕೆ.ಶಿವಕುಮಾರ್ ಬಂದಿದ್ದಾರೆ.
ನಮ್ಮ ಭಾಗದ ಶಾಸಕರು ಮೈಸೂರು ದಸರಾ ಪ್ರವಾಸಕ್ಕೆ ಹೊರಟ್ಟಿದ್ದ ಉದ್ದೇಶವೇ ಬೇರೆ. ಈಗ ನಮ್ಮ ಮನೆಗೆ ಅಧ್ಯಕ್ಷರು ಸೇರಿದಂತೆ ಅನೇಕರು ಭೇಟಿಗೂ ಅದಕ್ಕೂ ಸಂಬಂಧ ಇಲ್ಲ . ಸದ್ಯಕ್ಕೆ ಯಾವುದೇ ಹುದ್ದೆಯನ್ನು ನಾವು ಕೇಳಿಲ್ಲ. ಲೋಕಸಭೆ ಚುನಾವಣೆ ಗೆಲ್ಲುವುದು ನಮ್ಮ ಮುಂದಿರುವ ಸವಾಲು ನಾವು ಅದಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ.
ಬಳಿಕ ಮಿಕ್ಕ ವಿಷಯಗಳ ಚರ್ಚೆಯಾಗಲಿದೆ. ತಾವು ಉಪಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇಟ್ಟಿಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಮ್ಮೊಂದಿಗೆ ಚರ್ಚೆ ಮಾಡಿಲ್ಲ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬೆಳಗಾವಿ ಜಿಲ್ಲೆಯ ಮಾಜಿ ಶಾಸಕ ಅಂಜಲಿ ನಿಂಬಾಳ್ಕರ್ ಬೇಡಿಕೆಯಿಟ್ಟಿದ್ದಾರೆ. ಅವರಿಗೆ ಅವಕಾಶ ಕೊಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಹೇಳಿದರು.