ಬೆಳಗಾವಿ, ಮೇ 8-ಪಹಲ್ಗಾಮ್ ನಲ್ಲಿ ಕಳೆದ ಏ.22ರಂದು 26 ಜನ ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿಗೆ ಪ್ರತಿಕಾರ ತೀರಿಸಿಕೊಂಡು ಪಾಕಿಸ್ತಾನ ಅಡಗುತಾಣದ ಮೇಲೆ ಆಪರೇಷನ್ ಸಿಂಧೂರ್ ನಡೆಸಿದ ಘಟನೆಯನ್ನು ಮಾಧ್ಯಮಗಳಿಗೆ ವಿವರಿಸಿದ ವೀರ ಸೇನಾನಿ ಕರ್ನಲ್ ಸುಫೀಯಾ ಕುರೇಶಿ ಬೆಳಗಾವಿಯ ಸೊಸೆಯಾಗಿದ್ದು ಹೆಮ್ಮೆಯ ಸಂಗತಿಯಾಗಿದೆ.
ಜಮ್ಮು-ಕಾಶ್ಮೀರದ ಪಹಲ್ಟಾಮ್‌ನಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಹತ್ಯೆಯಾದ ನಮ್ಮ ಜನರ ಪ್ರತಿಕಾರಕ್ಕೆ ಇಡೀ ದೇಶವೇ ಬೆಂಕಿ ಉಗುಳುತ್ತಿತ್ತು. ಭಾರತೀಯ ನಾರಿಯರ ಪತಿಯಂದಿರನ್ನು ಕೊಂದು, ಕುಂಕುಮ ಅಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕೆಂದು ಪ್ರತಿಯೊಬ್ಬ ಭಾರತೀಯರು ಹಾತೋರೆಯುತ್ತಿದ್ದರು.
ಬುಧವಾರ ಬೆಳಗ್ಗೆ ನಡುರಾತ್ರಿ ಭಾರತೀಯ ಸೈನಿಕರು ವೈಮಾನಿಕ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಉಗ್ರರ ಹೆಡೆಮುರಿ ಕಟ್ಟಿ 9 ಸ್ಥಳಗಳ ಮೇಲೆ ದಾಳಿ ಮಾಡಿದ್ದ ಆಪರೇಷನ್ ಸಿಂಧೂರ್ ಎಳೆ ಎಳೆಯಾಗಿ ವಿವರಿಸಿದ್ದು ಬೆಳಗಾವಿಯ ಸೊಸೆ ಕರ್ನಲ್ ಸುಫೀಯಾ ಎನ್ನುವುದು ಭಾರತೀಯರ ಹೆಮ್ಮೆಯಾಗಿದೆ.
ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದಾರೆ. ಸುಫೀಯಾ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ. ಪತಿ, ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.
ಸುಫೀಯಾ ಪತಿ ತಾಜುದ್ದೀನ್ ಬಾಗೇವಾಡಿ ಸಹ ಕರ್ನಲ್ ಆಗಿದ್ದಾರೆ. ಕಳೆದ 2015ರಲ್ಲಿ ಮದುವೆ ಆಗಿರೋ ತಾಜುದ್ದೀನ್ ಸುಫೀಯಾ ಅವರದ್ದು ಪ್ರೇಮ ವಿವಾಹವಾಗಿದ್ದಾರೆ. ಕರ್ನಲ್ ಸುಫೀಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಸದ್ಯ ಸುಫೀಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.