ಬೆಂಗಳೂರು,ಮೇ 8- ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯನ್ನು ದ್ವಿಚಕ್ರವಾಹನದಲ್ಲಿ ಹಿಂಭಾಲಿಸಿಕೊಂಡು ಹೋಗಿ 50ಗ್ರಾಂ ಸರ ಎಗರಿಸಿ ಸರಗಳ್ಳರು ಪರಾರಿಯಾಗಿರುವ ಘಟನೆ ಸುಬ್ರಹಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಪೂರ್ಣ ಪ್ರಜ್ಞಾ ಲೇಔಟ್‌ನ ನಿವಾಸಿ ಭಾರ್ಗವಿ ಸರ ಕಳೆದುಕೊಂಡ ಉದ್ಯೋಗಿ.ಭಾರ್ಗವಿಯವರು ಕೆಲಸ ಮುಗಿಸಿಕೊಂಡು ಬಸ್‌ನಲ್ಲಿ ಬಂದು ರಾತ್ರಿ 9.30ರ ಸುಮಾರಿನಲ್ಲಿ ಬಸ್ ಇಳಿದು ಮನೆಗೆ ನಡೆದು ಹೋಗುತ್ತಿದ್ದರು.
ಇನ್ನೇನು ಮನೆ ಸ್ವಲ್ಪ ದೂರ ಇದ್ದಂತೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ಸರ ಗಳ್ಳರು ಸಮಯ ಸಾಧಿಸಿ 50ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ. ಭಾರ್ಗವಿಯವರ ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡರಾದರೂ ಅಷ್ಟರಲ್ಲಿ ಸರ ಗಳ್ಳರು ಕಣರೆಯಾಗಿದ್ದಾರೆ.
ಈ ಬಗ್ಗೆ ಅವರು ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಸಿ ಸರ ಗಳ್ಳರ ಪತ್ತೆಗೆ ಬಲೆಬೀಸಿದ್ದಾರೆ.