Thursday, May 8, 2025
Homeರಾಷ್ಟ್ರೀಯ | Nationalಸರ್ವಪಕ್ಷಗಳ ಸಭೆ : ಸಿಂಧೂರ್‌ ಕಾರ್ಯಾಚರಣೆಗೆ ಪಕ್ಷಾತೀತ ಬೆಂಬಲ, ಒಗ್ಗಟ್ಟು ಪ್ರದರ್ಶನ

ಸರ್ವಪಕ್ಷಗಳ ಸಭೆ : ಸಿಂಧೂರ್‌ ಕಾರ್ಯಾಚರಣೆಗೆ ಪಕ್ಷಾತೀತ ಬೆಂಬಲ, ಒಗ್ಗಟ್ಟು ಪ್ರದರ್ಶನ

Union Minister Rajnath Singh chairs all-party meeting on ‘Operation Sindoor’

ನವದೆಹಲಿ,ಮೇ.8– ಜಮು ಮತ್ತು ಕಾಶೀರದ ಪಲ್ಗಾಮ್‌ನಲ್ಲಿ ನಡೆದಿದ್ದ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನ ಹಾಗೂ ಪಿಒಕೆಯ ಉಗ್ರಗಾಮಿ ನೆಲೆಗಳ ಮೇಲೆ ಭಾರತದ ಸೇನಾ ಪಡೆಗಳು ನಡೆಸಿದ ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಗೆ ಸರ್ವಪಕ್ಷಗಳ ಸಭೆಯಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಿನ ಮಂತ್ರ ಪಠಿಸಲಾಗಿದೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯ ಆಪರೇಷನ್‌ ಸಿಂಧೂರ್‌ ಯಶಸ್ವಿ ಕಾರ್ಯಾಚರಣೆ ಬಗ್ಗೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳೊಂದಿಗೆ ಮಾಹಿತಿ ಹಂಚಿಕೊಂಡಿದೆ. ನವದೆಹಲಿಯ ಸಂಸತ್‌ ಭವನದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ, ಆಪರೇಷನ್‌ ಸಿಂಧೂರ್‌ ಯಶಸ್ವಿ ಕಾರ್ಯಾಚರಣೆಗೆ ಸೇನಾಪಡೆಗಳನ್ನು ಅಭಿನಂದಿಸಲಾಯಿತು.

ಇದೇ ವೇಳೆ ಭಾರತದ ರಕ್ಷಣೆ ವಿಚಾರವಾಗಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಬೆಂಬಲಿಸುವುದಾಗಿ ವಿಪಕ್ಷ ನಾಯಕರು ಮತ್ತೊಮೆ ಭರವಸೆ ನೀಡಿದರು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌‍ ಜೈಶಂಕರ್‌ ಮತ್ತು ಸಚಿವರಾದ ಜೆ.ಪಿ.ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್‌ ಭಾಗವಹಿಸಿದ್ದರು.

ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌‍ನಿಂದ ಪ್ರತಿನಿಧಿಸಿದರೆ, ತೃಣಮೂಲ ಕಾಂಗ್ರೆಸ್‌‍ನಿಂದ ಸಂದೀಪ್‌ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿ.ಆರ್‌.ಬಾಲು, ಸಮಾಜವಾದಿ ಪಕ್ಷದ ರಾಮ್‌ ಗೋಪಾಲ್‌ ಯಾದವ್‌, ಎಎಪಿಯ ಸಂಜಯ್‌ ಸಿಂಗ್‌, ಶಿವಸೇನೆಯ (ಯುಬಿಟಿ) ಸಂಜಯ್‌ ರಾವುತ್‌, ಎನ್‌ ಸಿ ಪಿ (ಎಸ್ಪಿ) ಸುಪ್ರಿಯಾ ಸುಳೆ, ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಮತ್ತು ಬಿಜೆಡಿಯ ಸಸಿತ್‌ ಪಾತ್ರ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಜೆಡಿ(ಯು) ನಾಯಕ ಸಂಜಯ್‌ ಝಾ, ಕೇಂದ್ರ ಸಚಿವ ಮತ್ತು ಎಲ್‌ಪೆಪಿ (ರಾಮ್‌ ವಿಲಾಸ್‌‍) ನಾಯಕ ಚಿರಾಗ್‌ ಪಾಸ್ವಾನ್‌ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು.

ಆಪರೇಷನ್‌ ಸಿಂಧೂರ್‌ ಕುರಿತು ಸರ್ಕಾರವು ಗುರುವಾರ ಎಲ್ಲಾ ಪಕ್ಷಗಳಿಗೆ ಮಾಹಿತಿ ನೀಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳನ್ನು ಒಗ್ಗಟ್ಟಾಗಿ ನಿಲ್ಲುವಂತೆ ಮಾಡಿಕೊಂಡ ಮನವಿಗೆ ಪಕ್ಷ ಬೇಧ ಮರೆತು ಬೆಂಬಲ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ರೀತಿಯ ನಿರ್ಧಾರಕ್ಕೆ ನಮ ಬೆಂಬಲ ಸದಾ ಇರುತ್ತದೆ. ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಸಲಹೆ ಕೊಟ್ಟಿದ್ದಾರೆ.

ಆಪರೇಷನ್‌ ಸಿಂದೂರ್‌ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ವಿಪಕ್ಷಗಳಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ, ಗಡಿ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ವಿವರಣೆ ನೀಡಿದರು. ವಿಪಕ್ಷಗಳು ಈ ಮಾಹಿತಿಯನ್ನು ತೃಪ್ತಿದಾಯಕ ಎಂದು ಬಣ್ಣಿಸಿದ್ದು, ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಮತ್ತೊಮೆ ಭರವಸೆ ನೀಡಿದೆ.

ಅತ್ಯಂತ ವಿಸ್ತಾರವಾದ ಗಡಿಯಾಚೆಗಿನ ದಾಳಿಗಳಲ್ಲಿ ಭಾರತವು ಪಾಕಿಸ್ತಾನದ ಒಳಗೆ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಸಶಸ್ತ್ರ ಪಡೆಗಳ ಶೌರ್ಯದ ಬಗ್ಗೆ ವಿರೋಧ ಪಕ್ಷಗಳಿಗೆ ತಿಳಿಸಲಾಯಿತು. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬುದು ಸರ್ವಪಕ್ಷ ಸಭೆಗೆ ಪ್ರಧಾನಮಂತ್ರಿಯವರ ಸಂದೇಶವಾಗಿತ್ತು. ಇದಕ್ಕೆ ಬಹುತೇಕ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ.

ಆಪರೇಷನ್‌ ಸಿಂಧೂರ್‌ ಸೇನಾ ಕಾರ್ಯಾಚರಣೆ ಕೇವಲ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿದೆ. ಪಾಕಿಸ್ತಾನದ ಸೇನಾ ಸೌಲಭ್ಯಗಳಿಗಾಗಲಿ, ಅಲ್ಲಿನ ನಾಗರಿಕರಿಗಾಗಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ವಿಪಕ್ಷ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದೆ.

ವಿಪಕ್ಷ ನಾಯಕರು ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಒಕ್ಕೊರಲಿನಿಂದ ಸ್ವಾಗತಿಸಿದ್ದು, ಸೇನಾಪಡೆಗಳ ಧೈರ್ಯ ಮತ್ತು ಸಾಹಸವನ್ನು ಅಭಿನಂದಿಸಿವೆ. ಅಲ್ಲದೇ ಭಾರತದ ವಿರೋಧಿ ಭಯೋತ್ಪಾದನೆಗೆ ಕುಮಕ್ಕು ನೀಡುವ ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಯಾವುದೇ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿವೆ.

ಸರ್ವಪಕ್ಷ ಸಭೆಗೂ ಮೊದಲು ಮಾತನಾಡಿದ ಕೇಂದ್ರ ಸಚಿವ ಕಿರಣ್‌ ರಿಜಿಜು, ಸದ್ಯದ ಪರಿಸ್ಥಿತಿಯನ್ನು ಕೇವಲ ಕೇಂದ್ರ ಸರ್ಕಾರ ಮಾತ್ರ ನಿಭಾಯಿಸುತ್ತಿಲ್ಲ. ಇಡೀ ಭಾರತ ಈ ಸಂದರ್ಭದಲ್ಲಿ ಒಗ್ಗಟ್ಟಾಗಿದೆ. ಅದೇ ರೀತಿ ಗಡಿ ಸುರಕ್ಷತೆ ಬಗ್ಗೆ ವಿಪಕ್ಷಗಳಿಗೆ ಮಾಹಿತಿ ನೀಡುವುದು ಮತ್ತು ವಿಪಕ್ಷಗಳ ಸಲಹೆ ಪಡೆಯುವುದು ಪ್ರಜಾತಾಂತ್ರಿಕ ನಡೆ ಎಂದು ಹೇಳಿದ್ದಾರೆ. ಭಾರತದ ರಕ್ಷಣೆ ವಿಷಯದಲ್ಲಿ ನಾವೆಲ್ಲಾ ಒಂದು, ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಒಗ್ಗಟ್ಟಾಗಿದ್ದೇವೆ. ನಮ ಒಗ್ಗಟ್ಟು ಭಾರತೀಯರ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕಿರಣ್‌ ರಿಜಿಜು ಅಭಿಪ್ರಾಯಪಟ್ಟಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ನಿನ್ನೆ ನಸುಕಿನ ಜಾವ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು, ಇದರಲ್ಲಿ ಜೈಶ್‌-ಎ-ಮೊಹಮದ್‌ ಭದ್ರಕೋಟೆಯಾದ ಬಹಾವಲ್ಪುರ್‌ ಮತ್ತು ಲಷ್ಕರ್‌-ಎ-ತೊಯ್ಬಾದ ನೆಲೆ ಮುರಿಡ್ಕೆ ಸೇರಿವೆ.

ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಹತ್ಯಾಕಾಂಡದ ಎರಡು ವಾರಗಳ ನಂತರ ಆಪರೇಷನ್‌ ಸಿಂಧೂರ್‌ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಯಿತು. ದಾಳಿಯ ಕುರಿತು ನಾಯಕರಿಗೆ ಮಾಹಿತಿ ನೀಡಲು ಸರ್ಕಾರ ಈ ಹಿಂದೆ ಏಪ್ರಿಲ್‌ 24 ರಂದು ಸರ್ವಪಕ್ಷ ಸಭೆಯನ್ನು ಕರೆದಿತ್ತು.

ಸಭೆ ಆರಂಭಕ್ಕೆ ಮೊದಲು ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಪ್ರಧಾನಿ ನರೇಂದ್ರ ಮೋದಿ ಅವರು ದೇಶವು ಇಂತಹ ಪರಿಸ್ಥಿತಿಯಲ್ಲಿ ವಿಭಜನೆಯಾಗಬಾರದು ಎಂದು ಬಯಸುತ್ತಾರೆ ಎಂದು ಹೇಳಿದರು.

ಆಪರೇಷನ್‌ ಸಿಂಧೂರ್‌ ಅನ್ನು ಸಶಸ್ತ್ರ ಪಡೆಗಳು ಯಶಸ್ವಿಯಾಗಿ ನಿರ್ವಹಿಸಿವೆ. ಸರ್ಕಾರವು ಅದರ ಬಗ್ಗೆ ಬಹಳ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯವರ ಉದ್ದೇಶಗಳು ಈಗಾಗಲೇ ಜಗತ್ತಿಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಭಜನೆಯಾಗಬಾರದು ಎಂದು ಪ್ರಧಾನಿ ಬಯಸುತ್ತಾರೆ. ಪ್ರತಿಯೊಬ್ಬ ಭಾರತೀಯರೂ ಒಂದಾಗಬೇಕಾದ ಪರಿಸ್ಥಿತಿ ಇದು ಎಂದು ಹೇಳಿದರು.

RELATED ARTICLES

Latest News