ಬೆಂಗಳೂರು ಮೇ 10- ತಮ ಕಾರಿಗೆ ಹಾನಿಯಾಗಿದೆಯೆಂದು ಉದ್ಯಮಿಯೊಬ್ಬರ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳ ಸಮೇತ ಮಹಿಳೆ ಹಾಗೂ ಆಕೆಯ ಸಹಚರರು ಕಾರನ್ನು ತೆಗೆದುಕೊಂಡು ಹೋಗಿರುವ ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉದ್ಯಮಿ ವಿನಯ್‌ಗೌಡ ಎಂಬುವವರು ಸೆಂಟ್‌ಮಾರ್ಕ್ ರಸ್ತೆಯ ಪಾಪಣ್ಣ ಸ್ಟ್ರೀಟ್‌ನಲ್ಲಿ ವಾಸವಾಗಿದ್ದು, ಮೇ 3 ರಂದು ಬೆಳಗ್ಗೆ 4.15 ರಿಂದ 4.30 ರ ಮಧ್ಯೆ ಲ್ಯಾವೆಲ್ಲೆ ರಸ್ತೆಯಲ್ಲಿರುವ ಪೂರ್ವ ಗ್ರಾಂಡ್ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್ ಒಳಗಿನಿಂದ ತಮ ಕಾರನ್ನು ಹೊರಗೆ ತೆಗೆಯುತ್ತಿದ್ದರು.
ಆ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್‌ನ ಮುಂದೆ ರಸ್ತೆಯಲ್ಲಿ ನಿಂತಿದ್ದ ದೀಪ್ತಿ ಕಟ್ರಗಡ್ಡ ಎಂಬುವರ ಕಾರಿಗೆ ಆಕಸಿಕವಾಗಿ ತಾಗಿದೆ. ಆ ವೇಳೆ ಮಹಿಳೆ ಹಾಗೂ ಇನ್ನಿತರ ಸಹಚರರು ಏಕಾಏಕಿ ಉದ್ಯಮಿ ಮೇಲೆ ಹಲ್ಲೆ ಮಾಡಿ, ಉದ್ಯಮಿಯ ಸುಮಾರು 56.14 ಲಕ್ಷ ರೂ. ಬೆಲೆಬಾಳುವ ಕಾರು ಹಾಗೂ ಅದರಲ್ಲಿದ್ದ 1.25 ಲಕ್ಷ ರೂ. ಹಣ, 85 ಸಾವಿರ ಬೆಲೆಬಾಳುವ ಕೂಲಿಂಗ್ ಗ್ಲಾಸ್ ಹಾಗೂ 1.50 ಲಕ್ಷ ರೂ. ಬೆಲೆಬಾಳುವ ವ್ಯಾಲೆಟ್ ಸಮೇತ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಕಾರನ್ನು ಹಿಂದಿರುಗಿಸುವಂತೆ ದೀಪ್ತಿಯವರನ್ನು ಕೇಳಿದಾಗ, ನನ್ನ ಕಾರಿಗೆ ಡ್ಯಾಮೇಜ್ ಆಗಿದ್ದು 20 ಲಕ್ಷ ರೂ. ಕೊಟ್ಟರೆ ಕಾರು ಕೊಡುವುದಾಗಿ ಹೇಳಿದ್ದಾಳೆ.
ಉದ್ಯಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮೇಲೆ ಹಲ್ಲೆ ಮಾಡಿ ಕಾರು ಹಾಗೂ ಅದರಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಮಹಿಳೆ ಹಾಗೂ ಆಕೆಯ ಸಹಚರರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕಾರು ಹಾಗೂ ಅದರಲ್ಲಿರುವ ವಸ್ತುಗಳನ್ನು ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.