ಬೆಂಗಳೂರು : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಶ್ರೀ ಕೃಷ್ಣನ ನೆಲೆವೀಡು ಹಾಗೂ ಹಿಂದುಗಳ ಧಾರ್ಮಿಕ ಶ್ರಾದ್ದಾ ಕೇಂದ್ರವಾದ ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಕರಾವಳಿ ಜನತೆಯ ಮನೆಗೆದ್ದರು. ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿಯವರನ್ನು ರಾಜ್ಯ ಸರ್ಕಾರದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.

ಅಲ್ಲಿಂದ ನೇರವಾಗಿ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ಹೆಲಿಕಾಪ್ಟರ್ ನಲ್ಲಿ ಉಡುಪಿಯ ಮೈದಾನದಲ್ಲಿ ನಿರ್ಮಿಸಿದ್ದ ಹ್ಯಾಲಿಪ್ಯಾಡ್ ಆಗಮಿಸಿದರು.ಕೃಷ್ಣನಗರಿ ಉಡುಪಿಗೆ ಆಗಮಿಸುತ್ತಿದ್ದಂತೆ ಬೆಳಗಿನಿಂದಲೇ ಮೋದಿಯವರನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜೈಕಾರ ಮುಳುಗಿಸಿ ಹೂಮಳೆಯ ಮೂಲಕ ಸ್ವಾಗತಿಸಿದರು.
ಬಳಿಕ ಬನ್ನಂಜೆಯ ಡಾ. ವಿ. ಎಸ್ ಆಚಾರ್ಯ ಬಸ್ ನಿಲ್ದಾಣದ ಬಳಿ ಇರುವ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಪ್ರಾರಂಭಗೊಂಡ ರೋಡ್ ಶೋ ಬಸ್ ನಿಲ್ದಾಣದ ಭಾರ್ಗವಾಗಿ ಸಾಗಿ ಸುಮಾರು ಒಂದುವರೆ ಕಿಲೋಮೀಟರ್ ವರೆಗೂ ರೋಡ್ ಶೋ ನಡೆಸಿದ ಪ್ರಧಾನಿಯವರಿಗೆ ರಸ್ತೆಯ ಈ ಇಕ್ಕೆಲೆಗಳಲ್ಲೂ ಅಭಿಮಾನಿಗಳು ಜೈಕಾರ ಕೂಗಿ ಪುಷ್ಪ ದೃಷ್ಟಿ ಮಾಡಿದರು. ಈ ವೇಳೆ ಎಲ್ಲೆಡೆ ಮೋದಿ ಮೋದಿ ಹರ್ಷೋದ್ಗಾರಗಳು ಮೊಳಗಿದವ. ಹಾಗೆಯೇ ಯಾರೊಬ್ಬರಿಗೂ ನಿರಾಸೆ ಮಾಡದ ಪ್ರಧಾನಿ ಮೋದಿ ಎಲ್ಲರತ್ತ ಕೈಬೀಸಿ ನಗೆ ಬೀರಿದರು.

ನಡುವೆ ನಾರಾಯಣ ಗುರು ವೃತ್ತ, ಜಯಲಕ್ಷ್ಮೀ ಸಿಲ್ಕ್ಸ್ ಜಂಕ್ಷನ್ ಮತ್ತು ನಗರ ಬಸ್ ನಿಲ್ದಾಣಗಳಲ್ಲಿ ಮಿನಿ ವೇದಿಕೆಯಲ್ಲಿ ಹುಲಿವೇಷ, ಯಕ್ಷಗಾನ ವೇಷ ಮತ್ತು ಕೃಷ್ಣವೇಷಧಾರಿಗಳು ಪ್ರದರ್ಶನ ನೀಡಿದರು. 3 ಕಡೆಗಳಲ್ಲಿ ಮೋದಿ ಕಾರಿನಿಂದ ಇಳಿದು ಕೆಲ ಹೆಜ್ಜೆ ನಡೆದು ಜನರತ್ತ ಕೈಬೀಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಧಾನಿ ಮೋದಿ ಅವರ ‘ರೋಡ್ ಶೋ’ ಮಾರ್ಗದ ಮೂರು ಕಡೆಗಳಲ್ಲಿ ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ ವೇಷ, ಹುಲಿ ವೇಷ, ಶ್ರೀ ಕೃಷ್ಣ ವೇಷದಾರಿಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು. ರಸ್ತೆ ಮಾರ್ಗದ ಒಂದು ಕಡೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆ ರಸ್ತೆಯ ಇಕ್ಕೆಲಗಳಲ್ಲಿ 30 ಸಾವಿರಕ್ಕೂ ಅಧಿಕ ಜನರು ನಿಂತು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.
