ಬೆಂಗಳೂರು, ಮೇ 11- ಶ್ರೀನಗರದಿಂದ ಶೇರ್ – ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಪಾಕಿಸ್ತಾನದ ದಾಳಿ ನಡುವೆ ಉದ್ರಿಕ್ತ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಜಮ್ಮುವಿನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ವಿದ್ಯಾರ್ಥಿಗಳ ತೆರವಿಗೆ ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ನೆರವಾದ ಎಲ್ಲವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಶನಿವಾರ ಶ್ರೀನಗರದಿಂದ ಭದ್ರತೆಯ ನಡುವೆ ಬಸ್‌ನಲ್ಲಿ ಜಮ್ಮುವಿಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನದ ಹೊತ್ತಿಗೆ ರೈಲಿನಲ್ಲಿ ದೆಹಲಿ ತಲುಪಿದರು ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳ ಸ್ಥಳಾಂತರ ಮತ್ತು ಪ್ರಯಾಣದ ಎಲ್ಲಾ ಪ್ರಕ್ರಿಯೆಗಳನ್ನು ಕೇಂದ್ರ ಸಚಿವರು ಖುದ್ದು ಉಸ್ತುವಾರಿ ವಹಿಸಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು.
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮದ ವಿದ್ಯಾರ್ಥಿ ಹರ್ಷಿತ್ ಅವರ ಪೋಷಕರು ಜಮ್ಮುವಿನಲ್ಲಿ ಸಿಲುಕಿರುವ ತಮ್ಮ ಪುತ್ರನನ್ನು ರಕ್ಷಣೆ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಕೂಡಲೇ ಈ ವಿಷಯವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಮನವಿ ಮಾಡಿದ್ದರು.
ವಿದ್ಯಾರ್ಥಿಗಳ ಸಂತಸ: ಶ್ರೀನಗರದಿಂದ ದೆಹಲಿಗೆ ಸುರಕ್ಷಿತವಾಗಿ ವಾಪಸ್ ಬಂದ ಬಗ್ಗೆ ಎಲ್ಲಾ ಹದಿಮೂರು ವಿದ್ಯಾರ್ಥಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಶೇರ್ – ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರ್ಷಿತ್ ಮಾತನಾಡಿ, ನನ್ನದು ಚನ್ನಪಟ್ಟಣ ತಾಲ್ಲೂಕಿನ ತಗಚಗೆರೆ ಗ್ರಾಮ.
ನಾವು ಶ್ರೀನಗರದಲ್ಲಿದ್ದ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದಾಗ ತೀವ್ರ ಅನಿಶ್ಚಿತ ಮತ್ತು ಆತಂಕಕ್ಕೊಳಗಾಗಿದ್ದೆವು. ಆದರೆ, ಭಾರತ ಸರ್ಕಾರದ ತ್ವರಿತ ನೆರವಿನಿಂದಾಗಿ ನಾವು ಅಪಾಯದಿಂದ ಪಾರಾದವು. ಪ್ರಧಾನಿ ಮೋದಿಯವರ ಅವರ ಸ್ಪಷ್ಟ ಆದೇಶಗಳು ನಾವು ಸುರಕ್ಷಿತವಾಗಿ ಮರಳಲು ನೆರವಾದವು ನಮ್ಮ ಯೋಗಕ್ಷೇಮ, ಸುರಕ್ಷತೆಯ ಬಗ್ಗೆ ನಿರಂತರವಾಗಿ ನಿಗಾವಹಿಸಿದ್ದ ಕುಮಾರಸ್ವಾಮಿ ಅವರಿಗೆ ನಮ್ಮ ಹೃತ್ತೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಭಾಗ್ಯಶ್ರೀ ಪ್ರಸಾದ್ ಮಾತನಾಡಿ, ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಮ್ಮ ಪ್ರಧಾನಮಂತ್ರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಅವರು ತುಂಬಾ ಗಂಭೀರವಾಗಿ ಪರಿಗಣಿಸಿದ್ದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಕೇಂದ್ರ ಕುಮಾರಸ್ವಾಮಿ ಅವರ ವೈಯಕ್ತಿಕ ಕಾಳಜಿ, ನೆರವು ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಂದ ದೊರೆತ ಸಹಾಯದಿಂದ ನಾವು ಸುರಕ್ಷಿತವಾಗಿ ನಮ್ಮ ಮನೆಗಳಿಗೆ ತಲುಪುತ್ತಿದ್ದೇವೆ ಎಂದು ತಿಳಿಸಿದ್ದಾರೆ.