ಬೆಂಗಳೂರು : ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಿಂದ ಅಂಗೀಕಾರಗೊಂಡ ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಿ ಅನುಷ್ಠಾನಗೊಳಿಸಬೇಕು ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಮಾಡಿದೆ.
ಈ ಕಾನೂನು ಅನುಮೋದನೆ ಪಡೆದ ನಂತರ, ಶ್ರೀಮಂತ ಎ ಮತ್ತು ಬಿ ವರ್ಗದ ದೇವಾಲಯಗಳು ತಮ್ಮ ಹೆಚ್ಚುವರಿ ಆದಾಯವನ್ನು ಹಳ್ಳಿಗಳಲ್ಲಿನ ಅನುದಾನರಹಿತ ವರ್ಗದ ಸಿ ದೇವಾಲಯಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡುತ್ತದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಈ. ರಾಧಾಕೃಷ್ಣ ಎ' ಮತ್ತು
ಬಿ’ ವರ್ಗದ ದೇವಸ್ಥಾನಗಳ ಹೆಚ್ಚುವರಿ ಆದಾಯದಿಂದ ಅನುಪಾತಿಕವಾಗಿ ಗ್ರಾಮೀಣ ಪ್ರದೇಶದ `ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಕಾನೂನನ್ನು ತಿದ್ದುಪಡಿಗೊಳಿಸಿದೆ. ಆದರೆ ರಾಜ್ಯಪಾಲರ ಅಂಕಿತಕ್ಕಾಗಿ ಈ ತಿದ್ದುಪಡೆ ಕಾನೂನು ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದರು.
ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳುವುದು ಸರಿಯಲ್ಲ. ಆವೇಶದಲ್ಲಿ ಅವರು ಹೀಗೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಅಥವಾ ಖಾಸಗಿಯವರಿಗೆ ನೀಡಬಾರದು ಎಂದು ಅವರು ಮನವಿ ಮಾಡಿದರು.
ಉಭಯ ಸದನಗಳಲ್ಲಿ ಎಲ್ಲ ಪಕ್ಷಗಳು ಸರ್ವಾನುಮತದಿಂದ ಈ ಬಿಲ್‍ನ್ನು ಸ್ವಾಗತಿಸಿದ್ದು, ನೂತನ ತಿದ್ದುಪಡಿಯಾದ ಕಾಯ್ದೆಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದೆ. ಆದರೆ ಘನತೆವೆತ್ತ ರಾಜ್ಯಪಾಲರು ರಾಜಕೀಯ ರಹಿತವಾದ ಈ ಕಾಯ್ದೆಯನ್ನು ವಿನಾಕಾರಣ ಅನುಮೋದನೆ ನೀಡದೆ ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಈ ಬಗ್ಗೆ ಒಕ್ಕೂಟದ ನೇತೃತ್ವದಲ್ಲಿ ನಿಯೋಗವನ್ನು ಕೊಂಡೊಯ್ದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕೂಡಲೇ ರಾಜ್ಯಪಾಲರು ಅಂಕಿತವನ್ನು ಹಾಕಿ ಕಾಯ್ದೆಯ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರೊ.ರಾಧಾಕೃಷ್ಣ ಒತ್ತಾಯಿಸಿದರು.
ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಹೆಚ್ಚಿನ ಸಮಸ್ಯೆಗಳಿಲ್ಲ. ಆದರೆ ಸಿ ದರ್ಜೆ ದೇವಾಲಯಗಳಲ್ಲಿ ಸರಿಯಾಗಿ ಎರಡು ಹೊತ್ತು ಪೂಜೆ ಮಾಡುವುದಕ್ಕೂ ಅರ್ಚಕರಿಗೆ ಕಷ್ಟವಿದೆ. ಆದ್ದರಿಂದ ಇದೀಗ ತಿದ್ದುಪಡಿಯಾಗಿರುವ ಕಾಯ್ದೆಯಿಂದ ಎ ಮತ್ತು ಬಿ ದರ್ಜೆಯ ದೇವಾಲಯಗಳ ಎಲ್ಲ ಖರ್ಚು?ವೆಚ್ಚಗಳನ್ನು ಪೂರೈಸಿ ಉಳಿದ ಹಣದ ಶೇ.10ನ್ನು ಸಿ.ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಸಿ.ದರ್ಜೆ ದೇವಾಲಯಗಳು ಲಕ್ಷಾಂತರ ಎಕರೆ ಭೂಮಿಯನ್ನು ಕಳೆದುಕೊಂಡಿವೆ. ಇರುವ ಭೂಮಿಯನ್ನು ದಶಕಗಳಿಂದ ಪ್ರಭಾವಿ ವ್ಯಕ್ತಿಗಳು ಲೀಸ್ ಮೇಲೆ ಬಳಸಿಕೊಳ್ಳುತ್ತಿದ್ದಾರೆ. ಆ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಆಗ್ರಹಿಸಿದ್ದಾರೆ.