ಬೆಂಗಳೂರು, ಮೇ.12- ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಪಹಲ್ಟಾಮ್ ದಾಳಿಯ ನಂತರ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಣಯಕ್ಕೆ ಅಭಿನಂದಿಸುವುದಾಗಿ ತಿಳಿಸಿದ ಅವರು, ನಮ್ಮ ಸೇನಾನಿಗಳು ಮಾಡಿರುವ ಕೆಲಸ ಮೆಚ್ಚಬೇಕು ಹಾಗೂ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಮತ್ತೆ ದಾಳಿ ಮಾಡಿದರೆ ನಮ್ಮ ಸೇನೆ ತಕ್ಕ ಉತ್ತರ ನೀಡಲಿದೆ. ನಾವು ಒಟ್ಟಾಗಿ ಸೇನೆಗೆ ಬೆಂಬಲ ನೀಡಬೇಕು ಎಂದು ಹೇಳಿದರು.
ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕಿಸ್ತಾನ ದಾಳಿ ಮಾಡಿದೆ.
ಪಾಕಿಸ್ತಾನ ಸೇನೆಗೆ ಈ ವಿಚಾರ ಗೊತ್ತಿದ್ದು ಭಾರತದ ಹಲವು ಕಡೆ ದಾಳಿ ಮಾಡಿ ಕದನ ವಿರಾಮವನ್ನು ಉಲ್ಲಂಘನೆ ಮಾಡಿದ್ದಾರೆ. ನಮ್ಮ ಸೇನೆ ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿ ದಾಳಿ ಯತ್ನವನ್ನು ವಿಫಲಗೊಳಿಸಿದೆ. ಪ್ರತೀಬಾರಿಯೂ ಪಾಕಿಸ್ತಾನ ಇಂತಹ ಅಧಿಕಪ್ರಸಂಗಿತನವನ್ನು ಮಾಡುತ್ತಾ ಬಂದಿದೆ. ಬೇರೆಬೇರೆ ದೇಶದ ಬಳಿ ಸಹಾಯ ಪಡೆದಿದೆ. ಆದರೆ ಭಾರತ ದಿಟ್ಟ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ಜೈಕಾರ ಹಾಕಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹ ಪರಿಸ್ಥಿತಿ ಇಲ್ಲ. ಯಾವುದೇ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಹೇಳಿದರು.