Tuesday, May 13, 2025
Homeರಾಷ್ಟ್ರೀಯ | National'ಆಪರೇಷನ್ ಸಿಂಧೂರ್' ವೇಳೆ ಸೇನೆಗೆ ನಿರಂತರವಾಗಿ ನೆರವು ನೀಡಿದ್ದ ಇಸ್ರೋದ 10 ಉಪಗ್ರಹಗಳು

‘ಆಪರೇಷನ್ ಸಿಂಧೂರ್’ ವೇಳೆ ಸೇನೆಗೆ ನಿರಂತರವಾಗಿ ನೆರವು ನೀಡಿದ್ದ ಇಸ್ರೋದ 10 ಉಪಗ್ರಹಗಳು

Amid India-Pakistan tensions, 10 satellites continuously working to ensure India's security: Isro chief

ಬೆಂಗಳೂರು,ಮೇ.12- ಭಾರತೀಯ ಸೇನೆಗೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿನ ಉಗ್ರರ ನೆಲೆಗಳನ್ನು ತೋರಿಸಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ). ಭಾರತದ ರಕ್ಷಣೆ ಮತ್ತು ಸುಭದ್ರತೆಯನ್ನು ಖಾತರಿಪಡಿಸುವ ಉದ್ದೇಶದಿಂದ ದೇಶದ 10 ಉಪಗ್ರಹಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.

ಭಾರತೀಯ ಸೇನೆ ನಡೆಸಿದ ಕ್ರೂಸ್ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳಿಗೆ ಆಗಿರುವ ಹಾನಿಗಳ ಕುರಿತು ಸಾಕ್ಷಿ ಸಮೇತ ಓಪನ್ ಸೋರ್ಸ್ ಇಂಟೆಲಿಜೆನ್ಸ್ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಸೇನೆಯ ಈ ಕಾರ್ಯಾಚರಣೆಗೆ ನೆರವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ ಸಂಸ್ಥೆಯಿಂದ ಎಂದು ಉನ್ನತ ಮೂಲಗಳಿಂದ ತಿಳಿಸಿವೆ.

ಈ ಕುರಿತು ಅಗರ್ತಲದಲ್ಲಿರುವ ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯದ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು, ನಾವು ದೇಶದ ಸುರಕ್ಷತೆಯನ್ನು ಖಾತರಿಪಡಿಸಲು ಬಯಸುವುದಾದರೆ, ಅದನ್ನು ನಮ್ಮ ಉಪಗ್ರಹಗಳ ಮೂಲಕ ಸಾಧಿಸಬೇಕು. ನಾವು ನಮ್ಮ 7 ಸಾವಿರ ಕಿಲೋಮೀಟರ್ ಕಡಲ ಕಿನಾರೆಯ ಮೇಲೆ ನಿಗಾ ಇಡಬೇಕು. ಉಪಗ್ರಹ ಮತ್ತು ಡೋನ್ ತಂತ್ರಜ್ಞಾನದ ಹೊರತಾಗಿ, ಹಲವು ಅಂಶಗಳನ್ನು ನಾವು ಸಾಧಿಸಲಾಗದು ಎಂದು ಸ್ಪಷ್ಟಪಡಿಸಿದರು.

ಯುದ್ಧದ ಸಂದರ್ಭ ನಿರ್ಮಾಣ ಆಗುತ್ತಿದ್ದಂತೆ ಭಾರತೀಯ ಸೇನೆ ಇಸ್ರೋ ಸಂಸ್ಥೆಯ ಸಹಾಯ ಕೇಳಿತ್ತು. ಹೀಗಾಗಿ 10 ಉಪಗ್ರಹಗಳಿಂದ ಸತತ ನಿಗಾ ವಹಿಸಿದ್ದ ಇಸ್ರೋ ಉಗ್ರರ ನೆಲೆ ಫೋಟೋಗಳನ್ನ ಕಳಿಸಿಕೊಟ್ಟಿತ್ತು. ಪಾಕಿಸ್ತಾನದ ಸೇನಾ ನೆಲೆಗಳು, ಡೋನ್ ಲಾಂಚ್ ಪ್ಯಾಡ್ಗಳ ಮಾಹಿತಿಯನ್ನು ಚಿತ್ರ ಸಮೇತ ಸಂಗ್ರಹಿಸಿಕೊಟ್ಟಿತ್ತು. ಹೀಗಾಗಿ ನಿಕರ ಗುರಿಯಿಟ್ಟ ಭಾರತೀಯ ಸೇನೆ ಉಗ್ಗರ ಸೇನಾ ನೆಲೆಗಳು ಹಾಗೂ ವಾಯು ನೆಲೆಗಳನ್ನು ಛಿದ್ರಗೊಳಿಸಿತ್ತು ಎಂದು ಇಸ್ರೋ ತಿಳಿಸಿರುವುದಾಗಿ ವರದಿಯಾಗಿದೆ.

ಇದುವರೆಗೆ ಇಸ್ರೋ 127 ಉಪಗ್ರಹಗಳನ್ನು ಉಡಾಯಿಸಿದೆ. ಇದರಲ್ಲಿ ಖಾಸಗಿ ಕಾರ್ಯಾಚರಣೆದಾರಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಕಾರ್ಯ ನಿರ್ವಹಿಸುವ ಉಪಗ್ರಹಗಳೂ ಸೇರಿವೆ. ಈ ಪೈಕಿ 22 ಕೆಳ ಭೂ ಕಕ್ಷೆಯಲ್ಲಿದ್ದರೆ 29 ಕೇಂದ್ರ ಸರ್ಕಾರದ ಸ್ವಾಮ್ಯದ ಜಿಯೊ ಸಿಂಕ್ರನೈಸ್ ಕಕ್ಷೆಯಲ್ಲಿವೆ. ಭಾರತ ಸುಮಾರು 12 ಬೇಹುಗಾರಿಕೆ ಉಪಗ್ರಹಗಳನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ಕಣ್ಣಾವಲು ಉದ್ದೇಶಗಳಿಗಾಗಿ ತಯಾರಿಸಿದ ಕಾರ್ಟೊಸ್ವಾಟ್ ಮತ್ತು ಆರ್‌ಐಎಸ್ಎಟಿ ಸರಣಿಯ ಉಪಗ್ರಹಗಳು, ಇಎಂಐಎಸ್ಎಟಿ ಮತ್ತು ಮೈಕ್ರೋಸ್ಯಾಟ್ ಸರಣಿಯ ಉಪಗ್ರಹಗಳು ಸೇರಿವೆ ಎಂದು ವಿವರಿಸಿದರು.

ಭಾರತವು ಪಾಕಿಸ್ತಾನದ ಪ್ರದೇಶದೊಳಗೆ ಆಯ್ದ ಮಿಲಿಟರಿ ಗುರಿಗಳ ಮೇಲೆ ನಿಖರ ದಾಳಿಗಳನ್ನು ನಡೆಸಿತು. ಇವುಗಳಲ್ಲಿ ರಫಿಕಿ, ಚಕ್ಸಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್ಗೊಟ್‌ನಲ್ಲಿರುವ ರಾಡಾರ್ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಮದ್ದುಗುಂಡು ಡಿಪೋಗಳು ಸೇರಿವೆ.

ಪಾಕಿಸ್ತಾನದ ಭೋಲಾರಿಯಲ್ಲಿರುವ ಪಿಎಎಫ್ ನೆಲೆಯ ಬಿಡಿಎ (ಬಾಂಬ್ ಹಾನಿಮೌಲ್ಯ ಮಾಪನ) ಚಿತ್ರವನ್ನು ಕಾವಾಗ್ರೇಸ್ ಹಂಚಿಕೊಂಡಿದೆ. ಭಾರತೀಯ ಎಎಎಂ (ವಾಯು-ಉಡಾವಣಾ ಕ್ರೂಸ್ ಕ್ಷಿಪಣಿ) ನಡೆಸಿದ ನಿಖರ ದಾಳಿಯ ಕುರಿತು ಸಾಕ್ಷಿ ಸಮೇತ ಮಾಹಿತಿ ಹಂಚಿಕೊಳ್ಳಲಾಗಿದೆ. ಪಿಎಎಫ್ (ಪಾಕಿಸ್ತಾನ ವಾಯುಪಡೆ) ಹ್ಯಾಂಗರ್ ಮೇಲೆ ಆಗಿರುವ ಎಫೆಕ್ಟ್ ಬಗ್ಗೆ ಸಾಕ್ಷಿ ಇದೆ.

ಸರ್ಗೋಧಾದಲ್ಲಿರುವ ಪಿಎಎಫ್ ನೆಲೆ ಮುಷಾಫ್‌ನ ಬಿಡಿಎ ವಿಶ್ಲೇಷಣೆ ಎಂಬ ಫೋಟೊವೊಂದನ್ನು ಒಸಿಂಟ್ ಹ್ಯಾಂಡಲ್ ಕಾವಾ ಸ್ಪೇಸ್ ಹಂಚಿಕೊಂಡಿದೆ. ದಾಳಿಯ ನಂತರದ ಚಿತ್ರಣ ವಿಶ್ಲೇಷಣೆಯು ಭಾರತೀಯ ಪಡೆಗಳಿಂದ ನಾಶವಾದ ರನ್ ವೇಯನ್ನು ತೋರಿಸುತ್ತದೆ ಎಂದು ಕಾವಾ ಸ್ಪೇಸ್ ಹೇಳಿದೆ. ಜಾಕೋಬಾಬಾದ್‌ನಲ್ಲಿರುವ ಪಿಎಎಫ್ ಬೇಸ್ ಶಹಬಾಜ್‌ನ ಕಾವಾ ಸ್ಪೇಸ್ ನಡೆಸಿದ ಬಿಡಿಎ ವಿಶ್ಲೇಷಣೆಯು, ಪಿಎಎಫ್ ಹ್ಯಾಂಗರ್ ಮೇಲೆ ಭಾರತೀಯ ಎಎಲ್ಸಿಎಂ ನಡೆಸಿದ ನಿಖರ ದಾಳಿಯ ಪರಿಣಾಮವನ್ನು ತೋರಿಸುತ್ತದೆ.

ಭಾರತದ ಕಣ್ಣಾವಲು ಸಾಮರ್ಥ್ಯ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ಭಾರತ 52 ಉಪಗ್ರಹಗಳನ್ನು ಉಡಾಯಿಸಲಿದೆ ಎಂದು ಕೆಲ ದಿನಗಳ ಹಿಂದೆ ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನಾ ಮತ್ತು ಅನುಮತಿ ಕೇಂದ್ರದ ಅಧ್ಯಕ್ಷ ಪವನ್ ಕುಮಾರ್ ಗೋಯಂಕಾ ಪ್ರಕಟಿಸಿದ್ದರು.

RELATED ARTICLES

Latest News