ನವಹದಲಿ,ಮೇ 12- ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿರುವ ಬೆನ್ನಲ್ಲೇ ಉಭಯ ರಾಷ್ಟ್ರಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ (ಡಿಜಿಎಮ್‌ಒ) ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಈ ಮಹತ್ವದ ಸಭೆಯಲ್ಲಿ ಭಾರತದ ಪರವಾಗಿ ಡಿಜಿಎಮ್ಒ ರಾಜೀಂ ಘಾಯಿ ಹಾಗೂ ಪಾಕಿಸ್ತಾನದ ಪರವಾಗಿ ಅಬ್ದುಲ್ ಭಾಗಿಯಾಗಲಿದ್ದಾರೆ.
ಉಭಯ ನಾಯಕರು ಹಾಟ್ ಲೈನ್ ಮೂಲಕ ಮಾತುಕತೆ ನಡೆಸಲಿದ್ದು, ಕೆಲವು ಒಪ್ಪಂದಗಳಿಗೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ. ಎರಡೂ ರಾಷ್ಟ್ರಗಳ ಡಿಜಿಎಮ್ಗಳು ಮಾತ್ರ ಈ ಸಭೆಯಲ್ಲಿ ಭಾಗಿಯಾಗಲಿದ್ದು ಉಳಿದಂತೆ ಯಾವುದೇ ಅಧಿಕಾರಿಗಳು ಭಾಗವಹಿಸುವುದಿಲ್ಲ. ಕೇವಲ ಡಿಜಿಎಮ್‌ಒ ಮಟ್ಟದ ಹಂತಕ್ಕೆ ಸೀಮಿತಗೊಳಿಸಲಾಗಿದೆ.
ಇದಕ್ಕೂ ಮುನ್ನ 12.30ಕ್ಕೆ ಸಭೆ ನಿಗದಿಯಾಗಿತ್ತು. ಆದರೆ ಪ್ರಧಾನಿ ನಿವಾಸದಲ್ಲಿ ಮೂರು ಸೇನಾ ಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಸೇನಾ ಪಡೆಗಳು, ರಕ್ಷಣಾ ಪಡೆಯ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಇಲಾಖೆ ಮುಖ್ಯಸ್ಥರು ಭಾಗಿಯಾಗಿದ್ದರು.
ಹೀಗಾಗಿ ನಿಗದಿಯಾಗಿದ್ದ ಸಭೆಯನ್ನು 5 ಗಂಟೆಗೆ ಮುಂದೂಡಲಾಗಿದೆ. ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಭಾರತದ ಡಿಜಿಎಮ್ ಗೆ ಮಾಹಿತಿ ನೀಡಲಾಗಿದೆ.ಪಾಕಿಸ್ತಾನದಲ್ಲಿರುವ ಭಾರತದ ಮೋಸ್ಟ್ ವಾಟೆಂಡ್ ಉಗ್ರರ ಹಸ್ತಾಂತರ, ಉಗ್ರಗಾಮಿ ಸಂಘಟನೆಗಳ ನಿಷೇಧ, ಆರ್ಥಿಕ ನೆರವು ಸ್ಥಗಿತ, ಭಯೋತ್ಪಾದಕ ನೆಲೆಗಳ ಧ್ವಂಸ, ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಲವು ಷರತ್ತುಗಳನ್ನು ವಿಧಿಸಲು ಭಾರತವು ಮುಂದಾಗಿದೆ ಎಂದು ತಿಳಿದು ಬಂದಿದೆ.
ಭಾರತ ಎಂದಿಗೂ ಯಾವುದೇ ರಾಷ್ಟ್ರದ ಮೇಲೆ ಯುದ್ಧ ಸಾರುವುದಿಲ್ಲ, ಶಾಂತಿ ನಮ್ಮ ಮೊದಲ ಆಯ್ಕೆ. ಒಂದು ವೇಳೆ ನಮ್ಮ ಸಾರ್ವಭೌಮತೆಯ ಮೇಲೆ ದಾಳಿ ನಡೆಸಲು ಬಂದರೆ ಅದಕ್ಕೆ ತಕ್ಕ ಶಾಸ್ತಿ ನೀಡಲು ನಮ್ಮ ಸೇನಾ ಪಡೆ ಸಜ್ಜಾಗಿದೆ ಎಂಬ ಸಂದೇಶವನ್ನು ಪಾಕ್ ಗೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಒಂದು ವೇಳೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರೆ ಮಾತುಕತೆಯನ್ನು ಸ್ಥಗಿತಮಾಡಬೇಕು.ಕಾಶ್ಮೀರ ಎಂದೋ ಮುಗಿದ ಅಧ್ಯಾಯ. ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚರ್ಚೆ ಮಾಡೋಣ ಎಂಬ ಸಂದೇಶ ನೀಡಬೇಕು. ನಿಗದಿಯಾದ ವಿಷಯಗಳನ್ನು ಹೊರತು ಪಡಿಸಿ ಅನ್ಯ ವಿಷಯಗಳ ಬಗ್ಗೆ ಚರ್ಚೆ ಬೇಡ ಎಂದು ಪ್ರಧಾನಿ ಕಾರ್ಯಾಲಯ ಡಿಜಿಎಮ್‌ಒ ಅವರಿಗೆ ಸೂಚನೆ ಕೊಟ್ಟಿದೆ.