ಬೆಂಗಳೂರು, ಮೇ 13– ಲಾಟರಿ ಬೆಳೆ ಎಂದೇ ಕರೆಯಲಾಗುವ ಟೊಮ್ಯಾಟೋ ಬೆಳೆದು ಕಳೆದ ವರ್ಷ ಕೆಲವು ರೈತರು ಶ್ರೀಮಂತರಾಗಿದ್ದರು. ಕೆಜಿಗೆ ನೂರು ರೂ. ದಾಟಿತ್ತು. ಆದರೆ, ಈಗ ಬೆಲೆ ನೆಲ ಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ.
ಟೊಮ್ಯಾಟೋ ಅಡುಗೆ ಮನೆಯ ಕೆಂಪುಸುಂದರಿ ಎಂದೇ ಹೆಸರಾಗಿದ್ದು,ಒಮ್ಮೊಮ್ಮೆ ಬೆಲೆ ಏರಿಕೆಯಿಂದ ಸದ್ದು ಮಾಡಿದರೆ, ಮತ್ತೊಮ್ಮೆ ಬೆಲೆ ಕುಸಿತದಿಂದ ಮೂಲೆಗುಂಪಾಗುತ್ತದೆ.
ಬಿರುಬೇಸಿಗೆಯಲ್ಲಿ ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ,
ತುಮಕೂರು, ರಾಮನಗರ, ಮಾಗಡಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಟೊಮ್ಯಾಟೋ ಬೆಳೆಯಲಾಗುತ್ತದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ರೈತರು ಬೆಳೆ ಬೆಳೆದಿದ್ದಾರೆ.
ಆದರೆ, ಚಿಲ್ಲರೆಯಾಗಿ ಕೆಜಿಗೆ 5ರೂ.ಗೆ ಮಾರಾಟವಾಗುತ್ತದೆ. ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ 100 ರಿಂದ 120ರೂ.ಗೆ ಮಾರಾಟವಾಗುತ್ತದೆ. ಇದರಿಂದ ಕೂಲಿಯೂ ಕೂಡ ಸಿಗುತ್ತಿಲ್ಲ ಎಂದು ಕೆಲ ರೈತರು ಟೊಮ್ಯಾಟೋವನ್ನು ಕೀಳದೆ ಹಾಗೆಯೇ ಬಿಟ್ಟಿದ್ದಾರೆ.
ವಿದ್ಯುತ್ ಕಣ್ಣಾಮುಚ್ಚಾಲೆ, ದುಬಾರಿ ರಸಗೊಬ್ಬರ, ಔಷಧಿ, ಬಿತ್ತನೆ ಬೀಜ, ಉಳುಮೆಗೆ ಸಾವಿರಾರು ರೂ. ವೆಚ್ಚ ಮಾಡಿ ಬೆಳೆ ಬೆಳೆದಿದ್ದು, ರೈತರಿಗೆ ಬೆಲೆ ಕುಸಿತದಿಂದ ಆಘಾತವಾಗಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ. ಹೆಚ್ಚಾದ ಬಿಸಿಲಿನಿಂದ ಈ ಬಾರಿ ಅಷ್ಟೇನೂ ರೋಗಬಾಧೆ ಕಾಡದ ಹಿನ್ನೆಲೆಯಲ್ಲಿ ಬೇಗ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ರಾಜ್ಯಾದ್ಯಂತ ಬೇಸಿಗೆ ಮಳೆ ಪ್ರಾರಂಭವಾಗಿದ್ದು, ಇರುವ ಬೆಳೆಗೆ ಸ್ವಲ್ಪ ಹಾನಿಯುಂಟಾಗಿದೆ. ಕೆಲವು ದಿನಗಳ ನಂತರ ಬೆಲೆ ಹೆಚ್ಚಾಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.