ಬೆಂಗಳೂರು, ಮೇ.13- ಬಿಜೆಪಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಇಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿತು.
ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್ ಅವರ ಮನೆಗೆ ಕೆಲ ಆಪ್ತರೊಂದಿಗೆ ಆಗಮಿಸಿದ ಜಿ.ಎಂ.ಸಿದ್ದೇಶ್ವರ್ ಸುಮಾರು ಹೊತ್ತು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಸೌಜನ್ಯದ ಭೇಟಿ. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದರು.
ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಪಕ್ಷಾಂತರ ಮಾಡುವ ಯಾವ ಚರ್ಚೆಗಳೂ ಇಲ್ಲ. ಈ ಮೊದಲು ಎರಡು ಬಾರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಇದು ನನ್ನ ಮೂರನೇ ಭೇಟಿ ಎಂದು ಹೇಳಿದರು.
ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಉಚ್ಚಾಟಿಸಿದ ಬಳಿಕ ಅವರು ಎಲ್ಲಿಯೂ ಹೋಗಿಲ್ಲ, ನಾನೂ ಎಲ್ಲಿಗೂ ಹೋಗಿಲ್ಲ. ಯತ್ನಾಳ್ ಮತ್ತೆ ಬಿಜೆಪಿಗೆ ಸೇರುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿಧಾನಸಭೆಯ ಉಪಸಭಾಪತಿ ರುದ್ರಪ್ಪಲಮಾಣಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ಹಿಂದೆ ಅಪಘಾತಕ್ಕೊಳಗಾಗಿದ್ದ ರುದ್ರಪ್ಪ ಲಮಾಣಿ ಸುದೀರ್ಘ ಕಾಲ ಎಲ್ಲಿಯೂ ಹೊರಗೆ ಕಾಣಿಸಿಕೊಳ್ಳದೆ ವಿಶ್ರಾಂತಿಯಲ್ಲಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಅವರು ಅಪಘಾತದಿಂದಾಗಿ ಹೊರಗಡೆ ಓಡಾಡುತ್ತಿರಲಿಲ್ಲ. ಈಗ ಆರೋಗ್ಯ ಸುಧಾರಿಸಿದೆ. ವಿಧಾನಸೌಧಕ್ಕೆ ಭೇಟಿ ನೀಡಿ ದೈನಂದಿನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.