ಭೋಪಾಲ್,ಮೇ.14- ಪಾಕಿಸ್ತಾನದ ಉಗ್ರರ ವಿರುದ್ದ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಬಿಜೆಪಿ ಸಚಿವರೊಬ್ಬರು ನಾಲಿಗೆ ಹರಿಬಿಟ್ಟಿದ್ದು, ತನ್ನ ಹೇಳಿಕೆ ವಿವಾದ ಆಗುತ್ತಿದ್ದಂತೆ ಕ್ಷಮೆಯಾಚನೆ ಮಾಡಿದ್ದಾರೆ.
ಆಪರೇಷನ್ ಸಿಂದೂರ್, ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡುತ್ತಾ ಸಚಿವ ಕುನ್ವರ್ ವಿಜಯ್ ಶಾ ಸೋಫಿಯಾ ಖುರೇಷಿ ಬಗ್ಗೆ ಆಕ್ಷೇಪನಾರ್ಹ ಹೇಳಿಕೆ ನೀಡಿದ್ದಾರೆ. ಸೋಫಿಯಾ ಖುರೇಷಿಯನ್ನು ಭಯೋತ್ಪಾದಕ ಸಹೋದರಿ ಎಂದು ಕರೆಯುವ ಮೂಲಕ ಭಾರೀ ವಿವಾದಕ್ಕೀಡಾಗಿದ್ದಾರೆ. ಅವರ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪ್ರತಿಪಕ್ಷಗಳು ಕಿಡಿಕಾರಿದ್ದವು.
ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ವಿಜಯ್ ಶಾ, ನಾನು ದೇವರಲ್ಲ, ನಾನು ಕೂಡ ಮನುಷ್ಯ, ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ನಾನು 10 ಬಾರಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
ಮಹೌನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್ ಶಾ, ಉಗ್ರರು ಭೀಕರ ದಾಳಿ ಮಾಡುವ ಮಾಡುವ ಮೂಲಕ ನಮ್ಮ ಹೆಣ್ಣು ಮಕ್ಕಳ ಕುಂಕುಮ ಅಳಿಸಿದ್ದರು. ನಾವು ಅವರ ಸಹೋದರಿಯನ್ನೇ ಪಾಠ ಕಲಿಸಲು ಕಳುಹಿಸಿದೆವು.
ಅವರು ಹಿಂದೂಗಳನ್ನು ವಿವಸ್ತ್ರಗೊಳಿಸಿ ಕೊಂದರು. ಇದಕ್ಕೆ ಪ್ರತಿಯಾಗಿ ಮೋದಿ ಜಿ ಅವರ ಸಹೋದರಿಯನ್ನೇ ಕಳುಹಿಸಿದರು. ನಮ್ಮ ಸಮುದಾಯದ ಸಹೋದರಿಯರನ್ನು ವಿಧವೆಯರನ್ನಾಗಿ ಮಾಡಿದರೆ, ನಿಮ್ಮ ಸಮುದಾಯದ ಸಹೋದರಿ ನಿಮ್ಮನ್ನು ವಿವಸ್ತ್ರಗೊಳಿಸುತ್ತಾರೆ ಎಂಬ ಸಂದೇಶವನ್ನು ಕಳುಹಿಸಲು ಮೋದಿ ಉಗ್ರರ ಸಮುದಾಯದ ಸಹೋದರಿಯನ್ನೇ ಕಳುಹಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸಾವಿತ್ರಿ ಠಾಕೂರ್ ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ವೇದಿಕೆಯಲ್ಲಿದ್ದರು.
ಬಿಜೆಪಿ ನಾಯಕನ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇದನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ ಮತ್ತು ಶಾ ಅವರನ್ನು ತಕ್ಷಣ ಜಾರಿಗೆ ಬರುವಂತೆ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಮಧ್ಯ ಪ್ರದೇಶದ ಬಿಜೆಪಿ ಸರ್ಕಾರದ ಸಚಿವರೊಬ್ಬರು ನಮ್ಮ ಧೈರ್ಯಶಾಲಿ ಮಗಳು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅತ್ಯಂತ ಅವಮಾನಕರ, ನಾಚಿಕೆಗೇಡಿನ ಮತ್ತು ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು, ಸೇನಾ ಅಧಿಕಾರಿಗಳಿಗೆ ಯಾವುದೇ ಧರ್ಮವಿಲ್ಲ ಮತ್ತು ಅವರನ್ನು ಹಿಂದೂ ಅಥವಾ ಮುಸ್ಲಿಂ ಎಂದು ಗುರುತಿಸಲಾಗಿಲ್ಲ ಎಂದು ಹೇಳಿದರು. ಸೇನಾ ಅಧಿಕಾರಿಯ ಬಗ್ಗೆ ಸಚಿವ ವಿಜಯ್ ಶಾ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ, ಸೇನೆ ಮತ್ತು ಮಹಿಳೆಯರಿಗೆ ಮಾಡಿದ ಅವಮಾನ ಅದು ಸೇನಾ ಅಧಿಕಾರಿಯಾಗಿರಲಿ ಅಥವಾ ಸೈನಿಕನಾಗಿರಲಿ, ಅವರಿಗೆ ಯಾವುದೇ ಧರ್ಮವಿಲ್ಲ, ಅವರನ್ನು ಹಿಂದೂ ಅಥವಾ ಮುಸ್ಲಿಂ ಎಂದು ಪರಿಗಣಿಸಲಾಗುವುದಿಲ್ಲ. ದೇಶವೊಂದೇ ಅವರ ಧರ್ಮ ಎಂದು ಅವರು ಕಿಡಿ ಕಾರಿದರು.
ಅಲ್ಲದೇ, ವಿಜಯ್ ಶಾ ಹೇಳಿಕೆ ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಹೇಳಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಕೂಡಲೇ ಆ ಸಚಿವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಬೇಕೆಂದು ಬಿಜೆಪಿ ಪಕ್ಷವನ್ನು ಒತ್ತಾಯಿಸಿದ್ದಾರೆ.
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ವಿಜಯ್ ಶಾ. ನನ್ನ ಭಾಷಣವನ್ನು ಬೇರೆ ರೀತಿಯಲ್ಲಿ ಅರ್ಥೈಸಬೇಡಿ. ನೀವು ಏನು ಯೋಚಿಸುತ್ತಿದ್ದೀರಿ ಎಂಬುದರ ಸಂದರ್ಭದಲ್ಲಿ ಅಲ್ಲ. ಅವರು ನಮ್ಮ ಸಹೋದರಿಯರು. ಅವರು ಸೈನ್ಯದೊಂದಿಗೆ ಹೆಚ್ಚಿನ ಶಕ್ತಿಯಿಂದ ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.