ಮಂಗಳೂರು, ಮೇ.14- ರಾಜ್ಯದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಮಾಜಿ ರೌಡಿಶೀಟರ್ ಅನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಇಂಜಾಡಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಹರೀಶ್ ಇಂಜಾಡಿ ಈ ಮೊದಲು ನಕಲಿ ಚೆಕ್ ನೀಡಿ ಹಣ್ಣು-ಕಾಯಿ ಟೆಂಡರ್ ಪಡೆದು ದೇಗುಲದ ಆಡಳಿತ ಮಂಡಳಿಗೆ ವಂಚನೆ ಮಾಡಿದ್ದರು. ಅದರಲ್ಲಿ ಬಂಧನಕ್ಕೂ ಒಳಗಾಗಿದ್ದರು. ಮರಗಳ ಕಳ್ಳಸಾಗಾಣಿಕೆ, ಮರಳು ಮಾಫಿಯಾದಲ್ಲೂ ತೊಡಗಿಸಿಕೊಂಡಿದ್ದರು. ಇಂತವರನ್ನು ಪವಿತ್ರ ದೇವಸ್ಥಾನದ ಆಡಳಿತ ಮಂಡಳಿಗೆ ನೇಮಿಸಬಾರದು ಎಂದು ಗ್ರಾಮಸ್ಥರು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಆದರೆ ಅದನ್ನು ಮೀರಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರ ಶಿಫಾರಸ್ಸು ಆಧರಿಸಿ ಮುಜರಾಯಿ ಇಲಾಖೆ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೆ ಹರೀಶ್ ಇಂಜಾಡಿ ಅವರನ್ನು ನೇಮಿಸಿದೆ ಎಂದು ಆರೋಪಿಸಲಾಗಿದೆ.
ಹರೀಶ್ ಇಂಜಾಡಿ ನೇಮಕದ ಬೆನ್ನಲ್ಲೇ ಬಿಜೆಪಿ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಸುಹಾಸ್ ಶೆಟ್ಟಿ ಹತ್ಯೆಯಾದಾಗ ಮಂಗಳೂರಿಗೆ ಭೇಟಿ ನೀಡಿದ ಗೃಹಸಚಿವ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರೌಡಿ ಶೀಟರ್ ಮನೆಗೆ ಭೇಟಿ ನೀಡುವುದಿಲ್ಲ ಎಂದು ವಾಪಸ್ ಹೋಗಿದ್ದರು.
ಈಗ ಅದೇ ರೌಡಿಶೀಟರ್ ವ್ಯಕ್ತಿಯನ್ನು ಪವಿತ್ರ ದೇವಸ್ಥಾನದ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕೂಡಲೇ ಹರೀಶ್ ಇಂಜಾಡಿಯವರನ್ನು ಅಧ್ಯಕ್ಷ ಸ್ಥಾನದಿಂದ ಹೊರಗುಳಿಸಬೇಕು ಎಂಬ ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.