Thursday, May 15, 2025
Homeಬೆಂಗಳೂರುಸೌಲಭ್ಯಗಳ ಕೊರತೆ : ಪ್ರತಿಷ್ಠಿತ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರೋಗಿಗಳ ಪರದಾಟ

ಸೌಲಭ್ಯಗಳ ಕೊರತೆ : ಪ್ರತಿಷ್ಠಿತ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ರೋಗಿಗಳ ಪರದಾಟ

Lack of facilities: Patients flock to prestigious Jayadeva Hospital for treatment

ಬೆಂಗಳೂರು, ಮೇ 14- ಹೃದಯ ಸಂಬಂಧಿ ಚಿಕಿತ್ಸೆಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ದಿನೇದಿನೇ ವೈದ್ಯಕೀಯ ಸೌಲಭ್ಯಗಳು ಕ್ಷೀಣಿಸುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಈ ಮೊದಲು ಜಯದೇವದಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಕರ್ನಾಟಕ ಮಾತ್ರವಲ್ಲದೆ, ದೇಶ ವಿದೇಶಗಳಿಂದಲೂ ಜನ ಧಾವಿಸಿ ಬರುತ್ತಿದ್ದರು. ಯಾರಿಗೂ ವಿಳಂಬವಿಲ್ಲದಂತೆ, ತೊಂದರೆಯಾಗದಂತೆ ಚಿಕಿತ್ಸೆ ನೀಡುವ ಮೂಲಕ ಜಯದೇವ ಸಂಸ್ಥೆ ತನ್ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿತ್ತು.

ಚಿಕಿತ್ಸೆಯ ಬಳಿಕ ಆಸ್ಪತ್ರೆಯ ಗುಣದರ್ಜೆಯ ಬಗ್ಗೆ ಅವಲೋಕನಗಳು ನಡೆಯುತ್ತಿದ್ದವು. ಎಂದೂ ಅಪಸ್ವರ ಕೇಳಿಬಂದಿರಲಿಲ್ಲ. ಆಸ್ಪತ್ರೆಯಲ್ಲಿ ವೈದ್ಯರಿಂದ ಹಿಡಿದು ಕೆಳಹಂತದ ಸಿಬ್ಬಂದಿಗಳ ಸೌಜನ್ಯಯುತ ವರ್ತನೆ ಹೆಸರುವಾಸಿಯಾಗಿತ್ತು. ಸಕಾಲಿಕ ಸೇವೆಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದ್ದವು. ಸಾರ್ವಜನಿಕರಿಗಾಗಿ ಸೌಲಭ್ಯ ಹಾಗೂ ಅನುಕೂಲತೆಗಳನ್ನು ಕಲ್ಪಿಸಲಾಗಿತ್ತು.

ಆದರೆ ಇತ್ತೀಚೆಗೆ ಆಸ್ಪತ್ರೆಯಲ್ಲಿ ವ್ಯವಸ್ಥೆಗಳು ಹದಗೆಡುತ್ತಿವೆ ಎಂಬ ಆರೋಪ ಕೇಳಿಬಂದಿವೆ. ಪರೀಕ್ಷೆ, ಚಿಕಿತ್ಸೆ, ಗುಣಮಟ್ಟಗಳು ಉತ್ಕೃಷ್ಟ ದರ್ಜೆಯಲ್ಲಿದ್ದರೂ ಸಕಾಲಕ್ಕೆ ಸೇವೆ ದೊರೆಯುತ್ತಿಲ್ಲ ಎಂಬ ಆಕ್ಷೇಪಗಳಿವೆ. ಸಾಮಾನ್ಯ ಪರೀಕ್ಷೆ ಹಾಗೂ ವೈದ್ಯರ ಸಲಹೆಗೆ ಇಡೀ ದಿನ ಸಮಯ ವ್ಯರ್ಥವಾಗುತ್ತಿದೆ ಎಂದು ದೂರುಗಳಿವೆ.

ಎಕ್‌್ಸ-ರೇ, ಎಂಆರ್‌ಐ ಸ್ಕ್ಯಾನಿಂಗ್‌ ಸೇರಿದಂತೆ ಹಲವು ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿರುತ್ತಾರೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆರೇಳು ತಿಂಗಳು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಜಯದೇವ ಸಂಸ್ಥೆಯಲ್ಲಿರುವ ಎಲ್ಲಾ ಶಸ್ತ್ರಚಿಕಿತ್ಸಾ ಕೊಠಡಿಗಳು ಸದಾ ಬಿಜಿಯಾಗಿರುತ್ತವೆ. ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿರುವ ಜಯದೇವ ಸಂಸ್ಥೆಯಲ್ಲಿ ಈಗಲೂ ಸಾವಿರಾರು ಮಂದಿ ನೋಂದಣಿಯಾಗುತ್ತಿದ್ದಾರೆ. ಆದರೆ ಅವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವಲ್ಲಿ ಕೊರತೆ ಕಂಡುಬರುತ್ತಿವೆ ಎಂಬ ಆಕ್ಷೇಪಗಳಿವೆ.

ಇತ್ತೀಚೆಗೆ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸಾ ವೆಚ್ಛ ಭರಿಸಲಾಗದೆ ಜಯದೇವ ಸಂಸ್ಥೆಯನ್ನು ನಂಬಿಕೊಂಡಿರುವವರ ಸಂಖ್ಯೆ ಲಕ್ಷಾಂತರದಷ್ಟಿದೆ. ಜೊತೆಗೆ ಜಯದೇವ ಆಸ್ಪತ್ರೆಯಲ್ಲಿ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ದೊರೆಯಲಿದೆ ಎಂಬ ನಂಬಿಕೆ ಈಗಲೂ ಸಾರ್ವಜನಿಕ ವಲಯದಲ್ಲಿದೆ.

ಹೀಗಾಗಿ ಜನ ಸಾಲುಗಟ್ಟಿ ಬರುತ್ತಿದ್ದಾರೆ. ಆರ್ಥಿಕ ಸ್ಥಿತಿವಂತರೂ ಕೂಡ ಜಯದೇವದಲ್ಲಿಯೇ ಚಿಕಿತ್ಸೆ ಪಡೆಯುವ ರೂಢಿಗಳು ಮೊದಲಿನಿಂದಲೂ ಇದ್ದವು. ಆದರೆ ದಿನೇದಿನೇ ಆಸ್ಪತ್ರೆಯ ಚಿಕಿತ್ಸಾ ಸೇವೆಯ ಬಗ್ಗೆ ದೂರುಗಳು ಹೆಚ್ಚುತ್ತಿವೆ. ರಾಜ್ಯಸರ್ಕಾರ ಇತ್ತ ಗಮನ ಹರಿಸಿ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

RELATED ARTICLES

Latest News