ಬೆಂಗಳೂರು, ಮೇ 14– ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಕ್ರೀಡಾ ಮೀಸಲಾತಿ ಅಡಿಯಲ್ಲಿ ಸೀಟು ಪಡೆಯಲು ಮೇ 16ರಿಂದ ಮೇ 20ರವರೆಗೆ ಕಾಲಾವಕಾಶ ನೀಡಿದೆ.
ಕ್ರೀಡೆಗಳು ಮತ್ತು ಕ್ರೀಡಾಕೂಟಗಳ ಪಟ್ಟಿಯಲ್ಲಿರುವಂತೆ ಕ್ರೀಡಾ ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು, ಮೂಲ ಕ್ರೀಡಾ ಪ್ರಮಾಣ ಪತ್ರಗಳನ್ನು ಪ್ರಾಧಿಕಾರದ ಕಚೇರಿಯಲ್ಲಿ ಖುದ್ದಾಗಿ ಹಾಜರಾಗಲು ಸೂಚಿಸಿದೆ.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪರಿಣಿತರು ಕಚೇರಿಯಲ್ಲಿ ಹಾಜರಿದ್ದು, ದಾಖಲೆಗಳನ್ನು ಪರಿಶೀಲಿಸಲಿದ್ದಾರೆ ಎಂದು ಪ್ರಾಧಿಕಾರ ಪ್ರಕಟಣೆ ತಿಳಿಸಿದೆ. ಕ್ರೀಡಾ ಪ್ರವರ್ಗದ ಅಡಿಯಲ್ಲಿ ವಿದ್ಯಾರ್ಥಿಗಳ ಅರ್ಹತೆಯನ್ನು ನಿರ್ಣಯಿಸುವುದಕ್ಕೆ ಸಂಬಂಧಿಸಿದಂತೆ ಕ್ರೀಡಾ ಇಲಾಖೆ ಆಯುಕ್ತರು ಅಥವಾ ಅವರ ಅಧಿಕೃತ ನಾಮನಿರ್ದೇಶಿತರು ಅಂತಿಮ ಪ್ರಾಧಿಕಾರಿಯಾಗಿರುತ್ತಾರೆ.
ಈ ವಿಚಾರದಲ್ಲಿ ಪ್ರಾಧಿಕಾರ ಯಾವುದೇ ಹೊಣೆಯನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಕ್ರೀಡಾ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಸಿಇಟಿ ಅರ್ಜಿಯಲ್ಲಿ ಸಂಬಂಧಿಸಿದ ವಿಶೇಷ ವರ್ಗವನ್ನು ಕ್ರೈಮ್ ಮಾಡಿರಬೇಕು. ಆನ್ ಲೈನ್ ಮೂಲಕ ಅರ್ಜಿಯಲ್ಲಿ ವಿಶೇಷ ವರ್ಗವನ್ನು ಕ್ರೈಮ್ ಮಾಡದೇ ಇರುವ ಅಭ್ಯರ್ಥಿಗಳಿ ವಿಶೇಷ ವರ್ಗದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಹೇಳಿದೆ.
ಸಿಇಟಿ ಪ್ರವೇಶ ಪತ್ರ, ಆನ್ಲೈನ್ ಮೂಲಕ ಸಲ್ಲಿಸಿರುವ ಅಂತಿಮ ಅರ್ಜಿ, ಮೂಲ ಕ್ರೀಡಾ ಪ್ರಮಾಣ ಪತ್ರಗಳು ಹಾಗೂ ವ್ಯಾಸಂಗ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ ಎಂದು ಕೆಇಎ ತಿಳಿಸಿದೆ.