ಮೈಸೂರು.ಮೇ.16- ಆಸಲಿ ಚಿನ್ನದ ನಾಣ್ಯ ತೋರಿಸಿ ನಕಲಿ ನಾಣ್ಯ ನೀಡಿ ವ್ಯಕ್ತಿಯೊಬ್ಬರಿಗೆ ಅಪ್ಪ-ಮಗಳು 30 ಲಕ್ಷಕ್ಕೆ ಉಂಡನಾಮ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನೋಟು ಮುದ್ರಣಾಲಯದ ನೌಕರರು ಪರಿಚಯವಿದ್ದಾರೆ ಅವರಿಂದ ಹಣ ದ್ವಿಗುಣಗೊಳಿಸಿಕೊಡುವುದಾಗಿ ಹೇಳಿ ನಂಬಿಕೆ ಹುಟ್ಟಿಸಿ ಸಿನಿಮೀಯ ಶೈಲಿಯಲ್ಲಿ ಅಪ್ಪ-ಮಗಳು ವಂಚಿಸಿದ್ದಾರೆ.
ಸಧ್ಯ ವಂಚನೆಗೆ ಒಳಗಾದ ಕೆ.ಆರ್ ಪೇಟೆ ತಾಲೂಕು ಬೂಕನಕೆರೆ ನಿವಾಸಿ ಮಂಜು ಅವರು ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂದ ಮಂಡ್ಯ ಜಿಲ್ಲೆ ಗರುಡಾಪುರ ಗ್ರಾಮದ ವಾಸಿಗಳಾದ ಕೃಷ್ಣಪ್ಪ ಸ್ವಾಮೀಜಿ ಹಾಗೂ ಈತನ ಮಗಳು ಪುಷ್ಪ ಹಾಗೂ ಮತ್ತೊಬ್ಬನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಮೇಲುಕೋಟೆ ದೇವಸ್ಥಾನಕ್ಕೆ ತೆರಳಿದ್ದ ಮಂಜುರವರಿಗೆ ಪುಷ್ಪ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ತಂದೆ ಕೃಷ್ಣಪ್ಪರನ್ನ ಪರಿಚಯಿಸಿ ನೋಟುಮುದ್ರಣಾಲಯದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದಾಳೆ.. ಇದಕ್ಕೆ ಸೃಷ್ಟಿಸಿರುವ ಐಡಿ ಕಾರ್ಡ್ ಸಹ ತೋರಿಸಿದ್ದಾರೆ.ನೋಟು ಮುದ್ರಣಾಲಯದಲ್ಲಿ ಇರುವ ನೌಕರರು ತನಗೆ ತುಂಬಾ ಪರಿಚಯ ಇದ್ದಾರೆ. ಈವತ್ತು 15 ಲಕ್ಷ ಕೊಟ್ರೆ ನಾಳೆ 30 ಲಕ್ಷ ಕೊಡುವುದಾಗಿ ಮಂಜುಗೆ ಹೇಳಿದ್ದಾರೆ.
ಕೃಷ್ಣಪ್ಪನ ಮಾತನ್ನ ಮಂಜು ರವರು ನಂಬಿಲ್ಲ. ಇದೇ ವೇಳೆ ತಮ್ಮಲ್ಲಿ ಪೂರ್ವಜರು ನೀಡಿರುವ ಚಿನ್ನದ ನಾಣ್ಯಗಳಿವೆ ಅರ್ಧ ಬೆಲೆಗೆ ಕೊಡುವುದಾಗಿ ಹೇಳಿ ಒಂದು ಚಿನ್ನದ ನಾಣ್ಯ ತೋರಿಸಿದ್ದಾರೆ. ಇದನ್ನ ಪರಿಶೀಲಿಸಿದಾಗ ಆಸಲಿ ಎಂದು ಖಚಿತವಾಗಿದೆ. ನಂತರ ಇಂತಹ ನಾಣ್ಯಗಳು ತಮ್ಮಲ್ಲಿ ಅರ್ಧ ಕೆಜಿ ಇದೆ ಎಂದು ನಂಬಿಸಿದ್ದಾರೆ.
ಪುಷ್ಪ ಹಾಗೂ ಕೃಷ್ಣಪ್ಪ ಇಬ್ಬರೂ ಅಪ್ಪ-ಮಗಳು ಎಂಬ ಅನುಮಾನ ಬಾರದಂತೆ ನಟಿಸಿದ್ದಾರೆ.ಕೆಲವು ದಿನಗಳ ನಂತರ ಬೆಲವತ್ತಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ತಂಗಿದ್ದ ಪುಷ್ಪ ಮಾತನಾಡಬೇಕು ಎಂದು ಮಂಜುರನ್ನ ಕರೆಸಿಕೊಂಡಿದ್ದಾರೆ.ತಮ್ಮಲ್ಲಿರುವ ಬಂಗಾರದ ನಾಣ್ಯಗಳು ಹಾಗೂ ಒಡವೆಗಳನ್ನ ತೋರಿಸಿ ಅರ್ಧಬೆಲೆಗೆ ಕೊಡುವುದಾಗಿ ನಂಬಿಸಿದ್ದಾರೆ.
ವಂಚಕರ ಮಾತು ನಂಬಿದ ಮಂಜು 30 ಲಕ್ಷ ಹೊಂದಿಸಿಕೊಂಡು ತಮ್ಮ ಭಾವ ಮಂಜುನಾಥ್ ಜೊತೆ ಪುಷ್ಪ ಮನೆ ತಲುಪಿದ್ದಾರೆ. ಹಣದ ಜೊತೆ 5 ಚೆಕ್ ಲೀಫ್ ನೀಡುವಂತೆ ಕೃಷ್ಣಪ್ಪ ಕಂಡೀಷನ್
ಹಾಕಿದ್ದಾನೆ. ಹಣದ ಜೊತೆ ಚೆಕ್ ಲೀಫ್ ತಂದೆ ಮಂಜುರನ್ನ ಮಾತ್ರ ಮನೆ ಒಳಗೆ ಕರೆಸಿಕೊಂಡು ಒಡವೆಗಳು ಹಾಗೂ ಚಿನ್ನದ ನಾಣ್ಯಗಳಿರುವ ಚೀಲ ತೋರಿಸಿ 30 ಲಕ್ಷ ಹಣ ಪಡೆದುಕೊಂಡಿದ್ದಾರೆ. ಈ ವೇಳೆ ಕೃಷ್ಣಪ್ಪನ ಜೊತೆ ಮತ್ತೊಬ್ಬ ವ್ಯಕ್ತಿ ಹಣ, ಚಿನ್ನದ ನಾಣ್ಯವಿರುವ ಚೀಲ ಹಾಗೂ ಚೆಕ್ ಗಳನ್ನ ಒಂದು ಕೊಠಡಿಯಲ್ಲಿ ಇರಿಸಿ ನಾಳೆ ಬೆಳಿಗ್ಗೆ ಓಪನ್ ಮಾಡೋಣ ಎಂದು ಕೃಷ್ಣಪ್ಪ ಹೇಳಿದ್ದಾನೆ.
ಮರುದಿನ ಚಿನ್ನದ ನಾಣ್ಯಗಳನ್ನ ಕರಗಿಸಿ ಗಟ್ಟಿಮಾಡಿಕೊಡುವುದಾಗಿ ತಿಳಿಸಿದ್ದಾನೆ. ಇವರ ಮಾತನು ನಂಬಿದ ಮಂಜು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮರುದಿನ ಮುಂಜಾನೆ ಕೃಷ್ಣಪ್ಪ ಮನೆಯಿಂದ ಹೊರಟಿದ್ದಾನೆ. ಈ ವೇಳೆ ಪ್ರಶ್ನಿಸಿದ ಮಂಜುಗೆ ಎರಡು ದಿನ ಕೊಠಡಿ ಬಾಗಿಲು ತೆರೆಯುವುದು ಬೇಡವೆಂದು ನಂಬಿಕೆ ಹುಟ್ಟಿಸಿದ್ದಾನೆ.
ತೆಲುಗು ಸಿನಿಮಾ ಒಂದರಲ್ಲಿ ಬರುವ ಸನ್ನಿವೇಶವನ್ನ ಸೃಷ್ಟಿಸಿ ಕೃಷ್ಣಪ್ಪ ಹಾಗೂ ವ್ಯಕ್ತಿ ಮನೆಯಿಂದ ಜಾಗ ಖಾಲಿ ಮಾಡಿದ್ದಾರೆ. ನಂತರ ಎರಡು ದಿನವಾದರೂ ಕೃಷ್ಣಪ್ಪ ಬಂದಿಲ್ಲ. ಇದೇ ವೇಳೆ ಪುಷ್ಪ ಸಹ ಸಬೂಬು ಹೇಳಿ ಎಸ್ಕೆಪ್ ಆಗಿದ್ದಾಳೆ. ಅನುಮಾನದಿಂದ ಪುಷ್ಪಗೆ ಪೋನ್ ಮಾಡಿದಾಗ ಕೃಷ್ಣಪ್ಪ ಕಾರ್ಗಿಲ್ ಸಮೀಪ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಕಥೆ ಕಟ್ಟಿದ್ದಾಳೆ. ಕೃಷ್ಣಪ್ಪ ನಂಬರ್ ಗೆ ಫೋನ್ ಮಾಡಿದಾಗ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಮಾತನಾಡಿ ದಾರಿತಪ್ಪಿಸಿದ್ದಾನೆ.
ಆಘಾತಗೊಂಡ ಮಂಜು ಕೊಠಡಿ ತೆರೆದು ಪರಿಶೀಲಿಸಿದಾಗ ಹಣ, ಚೆಕ್ ಗಳು ಇರಲಿಲ್ಲ. ನಾಣ್ಯಗಳಿದ್ದ ಚೀಲ ಮಾತ್ರ ಕಂಡುಬಂದಿದೆ. ಅವುಗಳು ನಕಲಿ ಎಂದು ಖಚಿತವಾಗಿದೆ. ಕೂಡಲೇ ಎಚ್ಚೆತ್ತ ಮಂಜು ಗರುಡಾಪುರಕ್ಕೆ ತೆರಳಿದಾಗ ಆಸಲಿಯತ್ತು ಬೆಳಕಿಗೆ ಬಂದಿದೆ. ಕೃಷ್ಣಪ್ಪ ಹಾಗೂ ಪುಷ್ಪ ತಂದೆ ಮಗಳೆಂದು ಖಚಿತವಾಗಿದೆ. ವಂಚನೆಗೆ ಒಳಗಾಗಿರುವುದ ಖಚಿತವಾಗಿದೆ.ತೆಲುಗು ಚಿತ್ರ ಅಲ್ಲು ಅರ್ಜುನ್ ನಟಿಸಿದ ಬದ್ರಿನಾಥ್ ಚಿತ್ರದಲ್ಲಿ ಬಹುತೇಕ ಇಂಥದ್ದೇ ಒಂದು ಸನ್ನಿವೇಶ ಬರುತ್ತದೆ. ಇದೇ ರೀತಿ ಮೋಸ ಹೋದ ಮಂಜು ಸಾಕಷ್ಟು ಬಾರಿ ಹಣ ವಾಪಸ್ ಪಡೆಯಲು ಯತ್ನಿಸಿ ಸೋತಿದ್ದಾರೆ. ನಂತರ ಎನ್‌ಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.