ನವದೆಹಲಿ, ಮೇ 16- ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಬಳಿ ಹಣವೇ ಇಲ್ಲ ಎಂದು ಮೊಸಳೆ ಕಣ್ಣೀರು ಹಾಕಿದ್ದ ಕಾಂಗ್ರೆಸ್ 2019ರಲ್ಲೇ ಟರ್ಕಿಯಲ್ಲಿ ಸಾಗರೋತ್ತರ ಕಚೇರಿ ತೆರೆಯಲು ಹಣ ಎಲ್ಲಿಂದ ತಂದಿತ್ತು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಇದರ ಜೊತೆಗೆ ಟರ್ಕಿ ಹಾಗೂ ಕಾಂಗ್ರೆಸ್ ನಡುವಿನ ಸಂಬಂಧಗಳ ಬಗ್ಗೆ ಪ್ರಶ್ನೆಗಳ ಸುರಿಮಳೆ ಶುರುವಾಗಿದೆ. ಅದು 2019ರ ಸಮಯ ಕಾಶ್ಮೀರ ಕುರಿತು ವಿಶ್ವಸಂಸ್ಥೆಯಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಟರ್ಕಿಯಲ್ಲಿ ತನ್ನ ಸಾಗರೋತ್ತರ ಕಚೇರಿಯನ್ನು ತೆರೆದಿತ್ತು.
ಮೊಹಮ್ಮದ್ ಯೂಸುಫ್ ಖಾನ್ ಎಂಬುವವರು ಟರ್ಕಿಯಲ್ಲಿ ಈ ಕಚೇರಿಯ ನೇತೃತ್ವವಹಿಸಿದ್ದಾರೆ. ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಎಂಬುದು ಕಾಂಗ್ರೆಸ್ ಬೆಂಬಲಿಗರ ಗುಂಪಾಗಿದ್ದು, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ವಿದೇಶಗಳಲ್ಲಿ ಪ್ರಚಾರ ಮಾಡುತ್ತಾರೆ. ರಾಹುಲ್ ಗಾಂಧಿಯವರ ಆಪ್ತ ಮಿತ್ರ ಸ್ಯಾಮ್ ಪಿತ್ರೋಡಾ ಐಒಸಿಯ ಅಧ್ಯಕ್ಷರಾಗಿದ್ದಾರೆ.
ಟರ್ಕಿಯಲ್ಲಿ ಕಚೇರಿ ಆರಂಭ ಹಾಗೂ ಟರ್ಕಿಯರನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿಲುವು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈಗ ಟರ್ಕಿ ಮತ್ತು ಭಾರತದ ಸಂಬಂಧ ಹಳಸಿರುವಾಗ ಮತ್ತೆ ಕಾಂಗ್ರೆಸ್ ಬಗ್ಗೆ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ಹಾಗಾದರೆ ಅಂದು ಟರ್ಕಿಗೆ ಹೋಗಿ ಕಚೇರಿ ತೆರೆಯಲು ಕಾಂಗ್ರೆಸ್‌ಗೆ ಹಣ ಎಲ್ಲಿಂದ ಬಂದು ಎಂದು ಪ್ರಶ್ನೆ ಮಾಡಲಾಗುತ್ತಿದೆ. ಹಾಗಾದರೆ ಟರ್ಕಿಯೇ ಕಾಂಗ್ರೆಸ್‌ಗೆ ಸಹಾಯ ಮಾಡಿತ್ತೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರನ್ನು ಟರ್ಕಿಯ ಬಹಿಷ್ಕಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದಾಗ, ಅವರು ತಕ್ಷಣಕ್ಕೆ ಯಾವುದೇ ಸ್ಪಷ್ಟ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ಈ ವಿಷಯವಾಗಿ ಬಿಜೆಪಿ ಅವರ ಮೇಲೆ ದಾಳಿ ಮಾಡಿತ್ತು.