ಹಾಸನ,ಮೇ.17- ಯುದ್ಧದ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆಯನ್ನು ಸರಿಯೆಂದು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.
ಜಿಲ್ಲೆಯ ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥ್ ಹೇಳಿಕೆಯಂತಹ ಸೂಕ್ಷ್ಮವಾದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ, ದೇಶಕ್ಕಿಂತ ದೊಡ್ಡವರು ಯಾರು ಇಲ್ಲ, ದೇಶವೇ ದೊಡ್ಡದು ಎಂದು ಹೇಳಿದರು.
ಕೆಲವರು ತಿಳಿದು ಹೇಳುತ್ತಾರೆ. ಕೆಲವರು ತಿಳಿಯದೆ ಹೇಳುತ್ತಾರೆ. ಇದು ಅಂತರರಾಷ್ಟ್ರೀಯ ಸಂಬಂಧ ದೇಶ ಸ್ವಾಭಿಮಾನದ ಸಂಬಂಧವಾಗಿದ್ದು. ದೇಶ ಉಳಿದರೆ ನಾವೆಲ್ಲ, ಮೊದಲು ದೇಶ ಉಳಿಯಬೇಕು ಎಂದರು.
ಇದೇ ವೇಳೆ ಸಚಿವ ಸ್ಥಾನದ ಆಸೆಯನ್ನು ಬಿಚ್ಚಿಟ್ಟ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡರು ಸರ್ಕಾರ ಜಾರಿಗೆ ಬಂದು ಎರಡು ವರ್ಷ ತುಂಬಿದ್ದು ಸುಭದ್ರವಾಗಿ ಉಳಿದಿದೆ, ಯಾರು ಏನೇ ಬೊಂಬಡಿ ಹೊಡೆದುಕೊಂಡರು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರ ರೀತಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಸಾಮಾಜಿಕ ನ್ಯಾಯ ಹರಿಕಾರ ಎಂದು ಹೇಳಬಹುದು. ಉತ್ತಮವಾದಂತಹ ಕೆಲಸಗಳು ಆಗಿವೆ ಎಂದು ರಾಜ್ಯ ಸರ್ಕಾರದ ಆಡಳಿತವನ್ನು ಅವರು ಸಮರ್ಥಿಸಿಕೊಂಡರು.