ಬೆಂಗಳೂರು, ಮೇ.18– ನಗರದಾದ್ಯಂತ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೆಲ್ಲಾ ಕೆರೆಗಳಂತಾಗಿ ವಾಹನ ಸವಾರರು ಹಾಗೂ ತಗ್ಗುಪ್ರದೇಶದ ನಿವಾಸಿಗಳು ಪರದಾಡುವಂತಾಯಿತು. ನಿನ್ನೆ ಸಂಜೆ 6.30ರ ಸುಮಾರಿಗೆ ಪ್ರಾರಂಭವಾದ ಮಳೆ 8 ಗಂಟೆವರೆಗೂ ನಿರಂತರವಾಗಿ ಸುರಿದಿದ್ದು, ವಿವಿಧೆಡೆ ಭಾರೀ ಅವಾಂತರ ಸೃಷ್ಟಿಸಿದೆ.
ಬಾಣಸವಾಡಿ ಮತ್ತು ಇಂದಿರಾನಗರದಲ್ಲಿ ಮಳೆಗಾಳಿಗೆ ಮರ ಮುರಿದುಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅದೇ ರೀತಿ ಪುಟ್ಟೇನಹಳ್ಳಿಯ ಬಳಿ ಅಪಾರ್ಟ್ ಮೆಂಟ್ ವೊಂದರ ಆವರಣದ ಕಾಂಪೌಂಡ್ ಕುಸಿದಿದೆ. ಸಾಯಿ ಲೇಔಟ್‌ನಲ್ಲಿ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದೆ.
ಬನ್ನೇರುಘಟ್ಟ ರಸ್ತೆಯ ಮೈಕೊ ಲೇಔಟ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ಪ್ರದೇಶಗಳಲ್ಲಿ ರಾಜಕಾಲುವೆಗಳ ಹಾಗೂ ಚರಂಡಿಗಳ ನೀರು ರಸ್ತೆಯ ಮೇಲೆ ಹರಿದಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಶ್ವತ್ಥನಗರ, ಸಾಯಿ ಲೇಔಟ್ ನದಿಯಂತಾಗಿದ್ದು, ನಿವಾಸಿಗಳು ಮನೆಯಿಂದ ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಪೀಠೋಪಕರಣಗಳು, ದವಸ ಧಾನ್ಯಗಳು ಮಳೆ ನೀರಿಗೆ ತೊಯ್ದು ಹೋಗಿದ್ದು, ನೀರನ್ನು ಪಂಪ್ ಗಳ ಮೂಲಕ ಹೊರಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.
ಮನೆಯೊಳಗೆ ನೀರು ನುಗ್ಗಿ ರಾತ್ರಿಯಿಡೀ ನಿದ್ರೆ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬ ಸದಸ್ಯರು ನೀರನ್ನು ಹೊರಹಾಕುತ್ತಲೇ ಜಾಗರಣೆ ಮಾಡುವಂತಾಗಿತ್ತು.
ಸಂಚಾರದಟ್ಟಣೆ :
ಸುಮಾರು ಒಂದೂವರೆ ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ವಿವಿಧೆಡೆ ಸಂಚಾರದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಗೊರಗುಂಟೆಪಾಳ್ಯ, ಮೈಸೂರು ರಸ್ತೆ, ಕೆಂಗೇರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಒಟ್ಟಿನಲ್ಲಿ ವರ್ಷದ ಮೊದಲ ಜೋರು ಮಳೆಯಿಂದ ಸಿಲಿಕಾನ್ ಸಿಟಿ ಜನತೆ ತತ್ತರಿಸಿದ್ದು, ಇನ್ನೂ ಪೂರ್ಣ ಪ್ರಮಾಣದ ಮುಂಗಾರು ಪ್ರಾರಂಭವಾದರೆ ಇನ್ನೇನು ಆವಾಂತರವಾಗುತ್ತದೆಯೋ ಎಂದು ಆತಂಕಕ್ಕೀಡಾಗಿದ್ದಾರೆ.