ಚಂಡೀಗಢ, ಮೇ 18– ಪಂಜಾಬ್‌ನ ಫಗ್ವಾಡ ಕಾಲೇಜಿನ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬೆಳ್ತಂಗಡಿ ಮೂಲದ ಯುವತಿ ತಾನು ತಂಗಿದ್ದ ಹೊಟೇಲ್‌ನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಏರೋಸ್ಪೇಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದ ಆಕಾಂಕ್ಷಾ ದೆಹಲಿಯಲ್ಲಿ ಜಪಾನ್ ಮೂಲದ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ನಡೆದ ಕಾಲೇಜಿನ
ಘಟಿಕೋತ್ಸವಕ್ಕಾಗಿ ಪಂಜಾಬ್‌ಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಟೇಲ್ ಗೆ ಬಂದು ತಂಗಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಶೈಕ್ಷಣಿಕ ಪ್ರಮಾಣ ಪತ್ರ ಪಡೆದ ನಂತರ ಮನೆಯವರಿಗೆ ಕರೆ ಮಾಡಿ ಖುಷಿ ಹಂಚಿಕೊಂಡಿದ್ದ ಆಕೆ ಮುಂದಿನ ವಾರ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, ಈಗ ಮಗಳು ಸಾವನ್ನಪ್ಪಿರುವುದರಿಂದ ಪೋಷಕರು ಆತಂಕಗೊಂಡಿದ್ದಾರೆ.
ಬೆಳ್ತಂಗಡಿಯ ಧರ್ಮಸ್ಥಳದ ಬೋಳಿಯಾರ್ ಮೂಲದವರಾದ ಆಕಾಂಕ್ಷಾ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ರಾಜ್ಯದಲ್ಲಿ ಶಿಕ್ಷಣ ಪಡೆದು ಪಂಜಾಬ್‌ನ ಪ್ರತಿಷ್ಠಿತ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ತೆರಳಿದ್ದರು.
ಅಲ್ಲಿ ಯಶಸ್ವಿಯಾಗಿ ಪದವಿ ಪೂರೈಸಿದ ನಂತರ ದೆಹಲಿಯಲ್ಲಿ ಅವರಿಗೆ ಕೆಲಸ ಸಿಕ್ಕಿತ್ತು. ಸದ್ಯದಲ್ಲೇ ಜಪಾನ್‌ಗೆ ತೆರಳಬೇಕಾಗಿದ್ದ ಅವರು ತಮ್ಮ ಕಾಲೇಜಿನ ಪ್ರಮಾಣ ಪತ್ರ ಪಡೆಯುವುದು ಅನಿವಾರ್ಯವಾಗಿತ್ತು.
ಹೀಗಾಗಿ ಪಂಜಾಬ್‌ಗೆ ತೆರಳಿ ತನ್ನ ಸಹಪಾಠಿಗಳನ್ನೆಲ್ಲ ಮಾತನಾಡಿಸಿ ಖುಷಿಯಿಂದ ಹೊಟೇಲ್ ರೂಮ್ ಗೆ ಹೋಗಿದ್ದರು. ಆದರೆ, ಬೆಳಗ್ಗೆಯಾಗುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆಯಿಂದ ಅವರ ಸ್ನೇಹಿತರು ಆತಂಕಗೊಂಡಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತಂತೆ ತನಿಖೆ ಕೈಗೊಂಡಿದ್ದಾರೆ. ಇತ್ತ ಪೋಷಕರು ಕೂಡ ಆತಂಕಗೊಂಡಿದ್ದು, ಸಂಬಂಧಿಕರನ್ನು ಪಂಜಾಬ್‌ಗೆ ಕಳುಹಿಸಿದ್ದಾರೆ.