ನವದೆಹಲಿ, ಮೇ 18- ವಿಶ್ವಕ್ರಿಕೆಟ್‌ನಲ್ಲಿ ಹಲವು ಸರಣೀಯ ದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಭಾರತರತ್ನ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ ಎಂದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಡಿ ದಾಟಲು ವಿರಾಟ್ ಕೊಹ್ಲಿಗೆ ಕೇವಲ 770 ಅವಶ್ಯಕತೆಯಿರುವ ಸಮಯದಲ್ಲೇ ರೆಡ್ ಬಾಲ್ ಕ್ರಿಕೆಟ್ ಗೆ ಕೊಹ್ಲಿ ನಿವೃತ್ತಿ ಘೋಷಿಸುವ ಮೂಲಕ ಹಲವು ಮಾಜಿ ಕ್ರಿಕೆಟಿಗರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೂ ಮುನ್ನ ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ ಗೆದ್ದ ಕೆಲವೇ ಕ್ಷಣಗಳಲ್ಲೇ ಚುಟುಕು ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು.
ಕ್ರೀಡಾ ಕ್ಷೇತ್ರಕ್ಕೆ ವಿರಾಟ್ ಕೊಹ್ಲಿ ನೀಡಿರುವ ಅನನ್ಯ ಸೇವೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಈಗಾಗಲೇ ಅರ್ಜುನ ಪ್ರಶಸ್ತಿ (2013), ಪದಶ್ರೀ (2017), ಖೇಲ್ ರತ್ನ (2018) ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು, ವಿರಾಟ್ ಕೊಹ್ಲಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದ್ದಾರೆ.
ವಿರಾಟ್ ಗೆ ಭಾರತರತ್ನ ನೀಡಿ:
ಸುದ್ದಿಗಾರರೊಂದಿಗೆ ತಮ ಅನಿಸಿಕೆ ಹಂಚಿಕೊಂಡಿರುವ ಸುರೇಶ್ ರೈನಾ ಅವರು, `ಭಾರತ ಕ್ರಿಕೆಟ್ ಜಗತ್ತಿಗೆ ವಿರಾಟ್ ಕೊಹ್ಲಿ ಅವರು ನೀಡಿರುವ ಅಗಾಧ ಕೊಡುಗೆ ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ನೀಡಬೇಕು’ ಎಂದು ಮಿಸ್ಟರ್ ಐಪಿಎಲ್ ಹೇಳಿದ್ದಾರೆ.
ಭಾರತ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿ ಇಡೀ ವಿಶ್ವವೇ ಟೀಮ್ ಇಂಡಿಯಾದತ್ತ ನೋಡುವಂತೆ ಮಾಡಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ 2014ರಲ್ಲಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾರತರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು. ಆ ಮೂಲಕ ಈ ಪ್ರಶಸ್ತಿ ಪಡೆದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.