ನವದೆಹಲಿ, ಮೇ 18– ತಮ ವೈಯಕ್ತಿಕ ದಾಖಲೆ ನಿರ್ಮಿಸುವ ಹೊಸ್ತಿಲಲ್ಲೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ತಾವೊಬ್ಬ ನಿಸ್ವಾರ್ಥ ಆಟಗಾರ ಎಂಬುದನ್ನು ವಿಶ್ವ ಕ್ರಿಕೆಟ್ ಗೆ ತೋರಿಸಿಕೊಟ್ಟಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಶ್ಲಾಘಿಸಿದ್ದಾರೆ.
ಭಾರತ ಕ್ರಿಕೆಟ್ ನ ಯಶಸ್ವಿ ನಾಯಕರಾಗಿದ್ದ ವಿರಾಟ್ ಕೊಹ್ಲಿ 68 ರೆಡ್ ಬಾಲ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 40 ಗೆಲುವು, 17 ಸೋಲು ಹಾಗೂ 11 ಡ್ರಾನೊಂದಿಗೆ ಅತಿ ಹೆಚ್ಚು ಟೆಸ್ಟ್ ಗೆಲುವು ಕಂಡ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ ತವರಿನಲ್ಲಿ 31 ಟೆಸ್ಟ್ ಪಂದ್ಯಗಳಲ್ಲಿ 24ರಲ್ಲಿ ಗೆಲುವು ಸಾಧಿಸಿ ತಮ ಪ್ರಾಬಲ್ಯ ಮೆರೆದಿದ್ದಾರೆ. ವಿದೇಶಿ ನೆಲಗಳಲ್ಲಿ 36 ಪಂದ್ಯಗಳಲ್ಲಿ 16 ಜಯ ಸಾಧಿಸಿ ಸೌರವ್ ಗಂಗೂಲಿ (11) ಅವರ ದಾಖಲೆ ಮುರಿದು ಗಮನ ಸೆಳೆದಿದ್ದಾರೆ. ಅಲ್ಲದೆ ಆಸ್ರೇಲಿಯಾ ( 2018-19)ಹಾಗೂ 2020-21ರಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು ಸಾಧಿಸಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಆರ್ ಸಿಬಿ ಹಾಗೂ ಕೆಕೆಆರ್ ತಂಡಗಳ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿ ಕುರಿತು ಆರೋನ್ ಫಿಂಚ್ ತಮ ಅನಿಸಿಕೆ ಹಂಚಿಕೊಂಡಿದ್ದಾರೆ. `ಕಳೆದ ಐದು ವರ್ಷಗಳಿಂದ ಗಮನಿಸಿದರೆ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಭವ ಕೊಂಚ ಕಳೆದುಕೊಂಡಂತೆ ಕಾಣುತ್ತದೆ. ಆದರೆ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ನಿಸ್ಸೀಮರಾಗಿರುವ ವಿರಾಟ್ ಕೊಹ್ಲಿ ಅವರು ತಮಗೆ ಸವಾಲಾಗಿದ್ದ ಸ್ಪಿನ್ ಬೌಲಿಂಗ್ ಅನ್ನು ಎದುರಿಸುವುದನ್ನು ಇತ್ತೀಚೆಗೆ ಕರಗತ ಮಾಡಿಕೊಂಡು ಅದನ್ನು ಮೈದಾನದಲ್ಲಿ ಪ್ರದರ್ಶಿಸಿದ್ದರು’ ಎಂದು ಫಿಂಚ್ ಶ್ಲಾಘಿಸಿದ್ದಾರೆ.
`ಟೆಸ್ಟ್ ಕ್ರಿಕೆಟ್ ನಲ್ಲಿ ಎದುರಾಳಿ ತಂಡವನ್ನು ಮಣಿಸಲು ನಮ ತಂಡಕ್ಕೆ ಏನು ಮುಖ್ಯ ಆಗುತ್ತದೆ ಎಂಬುದನ್ನು ತುಂಬಾ ಚೆನ್ನಾಗಿ ಅರಿತಿರುವ ವಿರಾಟ್ ಕೊಹ್ಲಿ ಅವರು, ತಮ ವೈಯಕ್ತಿಕ ದಾಖಲೆಗಳನ್ನು ನಿರ್ಮಿಸುವತ್ತ ಗಮನಹರಿಸದೆ, ಭಾರತ ತಂಡದ ಮುಂದಿನ ಟೆಸ್ಟ್ ಭವಿಷ್ಯದ ದೃಷ್ಟಿಯಿಂದ ನಿವೃತ್ತಿ ಘೋಷಿಸಿದ್ದು ಅವರ ನಿರ್ಧಾರ ಸ್ವಾಗತಾರ್ಹ’ ಎಂದು ಹೇಳಿದರು.
4ನೇ ಗರಿಷ್ಠ ಸ್ಕೋರರ್:
ವಿಶ್ವ ಕ್ರಿಕೆಟ್ ನ ನಾಲ್ವರು ದಿಗ್ಗಜರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಅವರು, ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ (15,921), ರಾಹುಲ್ ದ್ರಾವಿಡ್ (13,265) ಹಾಗೂ ಸುನೀಲ್ ಗವಾಸ್ಕರ್ (10,122) ನಂತರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ವಿರಾಟ್ ಕೊಹ್ಲಿ (9230) ಗುರುತಿಸಿಕೊಂಡಿದ್ದಾರೆ.