ಬೆಂಗಳೂರು, ಮೇ 19- ನಿನ್ನೆ ಸುರಿದ ಧಾರಾಕಾರ ಮಳೆಗೆ ಹಿಡಿ ಸಿಟಿ ಹೈರಾಣಾಗಿದ್ದು, ಜನ ಇದು ಗ್ರೇಟರ್ ಬೆಂಗಳೂರು ಅಲ್ಲ ವಾಟರ್ ಬೆಂಗಳೂರು ಎಂದು ಇಡಿ ಶಾಪ ಹಾಕುತ್ತಿದ್ದಾರೆ.ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ವಿಜಯನಗರ, ಚಾಮರಾಜಪೇಟೆ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದೆ.ರಾತ್ರಿ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ತಡರಾತ್ರಿ 1.30 ರ ನಂತರ ಪ್ರಾರಂಭವಾದ ಮಳೆ ಮುಂಜಾನೆ ವರೆಗೂ ಸುರಿದಿದೆ. ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.
ತಡರಾತ್ರಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ಸಿಟಿ ಮಾರ್ಕೆಟ್, ದಕ್ಷಿಣ ಮತ್ತು ಇತರ ಕೆಲವು ಭಾಗಗಳಲ್ಲಿ ಮುಂಜಾನೆಯೇ ಸಂಚಾರಕ್ಕೆ ಅಡಚಣೆಯಾಯಿತು. ರಾತ್ರಿ ಸುರಿದ ಮಳೆ ಬ್ಯಾಂಡ್ ಬೆಂಗಳೂರಿನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇ ಅಲ್ಲದೆ ಇದು ಗ್ರೇಟರ್. ಬೆಂಗಳೂರು ಅಲ್ಲ ವಾಟರ್ ಬೆಂಗಳೂರು ಎನ್ನುವುದಕ್ಕೆ ಸಾಕ್ಷಿಯಾಂತಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಕೆರೆಯಂತಾಗುವ ಸಾಯಿಲೇಔಟ್‌ನಲ್ಲಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿತ್ತು. ಗೊರಗುಂಟೆಪಾಳ್ಯ, ಹೆಬ್ಬಾಳ ಸುತ್ತಮುತ್ತ ರಸ್ತೆಗಳಲ್ಲಿ ಅಳವಾದ ಗುಂಡಿಗಳು ಬಿದ್ದು ವಾಹನ ಸವಾರರು ಮುಂದೆ ಸಾಗಲಾರದೆ ಪರದಾಡುವಂತಾಗಿತ್ತು.
ಹೊರಮಾವುವಿನ ಸಾಯಿ ಲೇಔಟ್‌ನಲ್ಲಿ ಜನ ಮನೆಯಿಂದ ಹೊರಬರಲಾಗದೇ ಪರದಾಡಿದರು. ಇಲ್ಲಿನ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದ ಪರಿಣಾಮ ನೀರಿನಲ್ಲಿ ಬೈಕ್ ಮತ್ತು ಕಾರುಗಳು ಸಿಲುಕಿಕೊಂಡಿದ್ದವರು. ಅಗ್ನಿಶಾಮಕ ದಳ ಹಾಗೂ ಸಿವಿಲ್ ಡಿಫೆನ್ಸ್‌ನವರು ರೆಸ್ಟೋ ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಮಳೆಯ ಅಬ್ಬರಕ್ಕೆ ಬಿಬಿಎಂಪಿಯ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಗೊರಗುಂಟೆಪಾಳ್ಯ, ಹೆಬ್ಬಾಳ ಸುತ್ತಮುತ್ತ ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಕೇವಲ ಒಂದೆರಡು ದಿನಗಳ ಮಳೆ ನಗರದ ಜನರು ನರಕ ನೋಡುವಂತೆ ಮಾಡಿಬಿಟ್ಟಿದೆ. ಇತ್ತ ಬ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ಜಪ ಮಾಡುತ್ತಿರುವ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ ಮಳೆಗಾಲದ ಸಿದ್ಧತೆ ಮಾಡಿಕೊಳ್ಳದಿರುವುದು ಮಳೆ ಸೃಷ್ಟಿಸಿದ ಅವಾಂತರಗಳಿಂದ ಬಟಾಬಯಲಾಗಿದೆ.
ಮಳೆಗಾಲ ಹತ್ತಿರವಾಗುತ್ತಿದ್ದರೂ ಎಚ್ಚೆತ್ತುಕೊಳ್ಳದಿರುವುದೇ ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಗಿದೆ.ಮನೆಗಳಿಗೆ ನುಗ್ಗಿದ ನೀರು: ವಿಜಯನಗರದ ಮಾರುತಿ ನಗರದಲ್ಲಿ ಮನೆಗಳಿಗೆ ನುಗ್ಗಿದ ಪರಿಣಾಮ ಮಳೆ ನೀರಲ್ಲಿ ತೇಲಿದ ಚೇರ್ ತರಕಾರಿ, ವಸ್ತುಗಳು ಅರ್ಧ ಮುಳುಗಿದ ಆಟೋದಿಂದಾಗಿ ಮನೆಯವರು ಪರದಾಡುವಂತಾಗಿತ್ತು.ಜಲವೃತವಾದ ಕೊತ್ತನೂರು ಹೆಣ್ಣೂರು ಕ್ರಾಸ್ಗಳಲ್ಲಿ ಹಲವಾರು ಮನೆಗಳಲ್ಲಿ ನೀರು ನುಗ್ಗಿ ಜಲ ಸಂಕಷ್ಟ ಎದುರಾಗಿತ್ತು.
ಹೊಳೆಯಾದ ನಗರ:
ಧಾರಾಕಾರ ಮಳೆಗೆ ಬನ್ನೇರುಘಟ್ಟ ರಸ್ತೆಯ ಬಿಸ್ಮಿಲ್ಲಾನಗರ ಹೊಳೆಯಾಗಿ ಪರಿವರ್ತನೆಯಾಗಿತ್ತು. ಹೀಗಾಗಿ ರಸ್ತೆ ಯಾವುದು ಎನ್ನುವುದನ್ನು ತಿಳಿಯಲು ಸಾಧ್ಯವಾಗದೆ ಜನ ತತ್ತರಿಸಿ ಹೋದರು.ಬಸ್ ನಿಲ್ದಾಣಕ್ಕೂ ನುಗ್ಗಿದ್ದ ನೀರು: ಶಾಂತಿನಗರ ಬಸ್ ಡಿಪೋ -2 ಮಳೆ ಆರ್ಭಟಕ್ಕೆ ಸಂಪೂರ್ಣ ಮುಳುಗಡೆಯಾಗಿತ್ತು. ಡಿಪೋ ಓಳಗಡೆ ನಿಂತಿರುವ ನೂರಕ್ಕೂ ಹೆಚ್ಚು ಬಸ್ಸು ಗಳುಬಸ್ ತೆಗೆಯಲು ಸಾಧ್ಯವಾಗದೆ ಡಿಪೋ ಹೊರಗಡೆಯೇ ಸಿಬ್ಬಂದಿಗಳು ಕಾಯುವಂತಾಗಿದೆ.
ಕೆಟ್ಟುನಿಂತ ವಾಹನಗಳು:
ನಾಯಂಡಳ್ಳಿ ಅಂಡರ್ ಪಾಸ್ ನಲ್ಲಿ ಹಾಳುದ್ದ ನೀರು ನಿಂತ ಪರಿಣಾಮ ಬಿಎಂಟಿಸಿ ಬಸ್, ಲಾರಿ ಹಾಗೂ ಆಟೋ ಕೂಡ ನೀರಲ್ಲಿ ಸಿಲುಕೊಂಡು ಕೆಟ್ಟು ನಿಂತ ಪರಿಣಾಮ ಬೇರೆ ವಾಹನ ಚಾಲಕರು ಅಂಡರ್‌ಪಾಸ್ ದಾಟಲು ಹರಸಾಸಹ ಪಟ್ಟರು.ರಾತ್ರಿ ಸುರಿದ ಭಾರಿ ಮಳೆಗೆ ನಗರದಲ್ಲಿ ಸಾಲು ಸಾಲು ಅವಾಂತರಗಳು ಸಂಭವಿಸಿವೆ. ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣ ಜಲಾವೃತವಾಗಿ ರಸ್ತೆಯಲ್ಲೇ ಮಳೆ ನೀರು ನಿಂತು ವಾಹನಸವಾರರ ಪರದಾಡಿದರು. ಸಿಲ್ಕ್ ಬೋರ್ಡ್ ಕಡೆಯಿಂದ ಅತ್ತಿಬೆಲೆ ಕಡೆಗೆ ಹೋಗುವ ಕಡೆಗೆ ಟ್ರಾಫಿಕ್ ಜಾಮ್ ಸುಮಾರು ಐದಾರು ಕಿಲೋಮೀಟರ್ ಉದ್ದಕ್ಕೆ ಸಂಚಾರ ದಟ್ಟಣೆ ಉಂಟಾಗಿತ್ತು.ವಿವೇಕನಗರ ಮುಖ್ಯ ರಸ್ತೆ ಕೂಡ ಜಲಾವೃತವಾಗಿ ವಿವೇಕ ನಗರ ಪೊಲೀಸ್ ಠಾಣೆ ಬಳಿ ನೀರು ನಿಂತು ಅವಾಂತರ ಸೃಷ್ಟಿಯಾಯಿತು. ಬೆಳಗ್ಗೆನೇ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರು ಇದರಿಂದ ಕಿರಿ ಕಿರಿ ಅನುಭವಿಸಿದರು.
ನಾಗವಾರದ ನಂದಗೋಕುಲ ಬಡಾವಣೆ ಜಲಾವೃತವಾಗಿ ಅಲ್ಲಿನ ಜನ ರಾತ್ರಿ ಇಡೀ ಜಾಗರಣೆ ಮಾಡಿದರು. ಇದೀಗ ಮನೆಗುಗ್ಗಿರುವ ಹಿನ್ನೆಲೆ ಮಕ್ಕಳನ್ನು ಕರೆದುಕೊಂಡು ಜನ ಹೊರ ಹೋಗುತ್ತಿದ್ದಾರೆ.ಸ್ವಿಮಿಂಗ್‌ಫೂಲ್ ಆದ ಈಜಿಪುರ, ಈಜಿಪುರದ ಗ್ರೇಪ್ ಗಾರ್ಡನ್ ಮೊದಲ ಕ್ರಾಸ್‌ನಲ್ಲಿ ಬೈಕ್‌ಗಳು ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಹಲವು ಬೈಕ್‌ಳಿಗೆ ಹಾನಿಯಾಗಿದೆ. ಮಾತ್ರವಲ್ಲಿ ಇಲ್ಲಿನ ರಸ್ತೆಗಳಲ್ಲಿ ಈಜಾಡುವುಷ್ಟರ ಮಟ್ಟಿಗೆ ನೀರು ನಿಂತಿದೆ. ಇಲ್ಲಿನ ಆರ್.ಎ.ರೋಡ್ ನಲ್ಲಿ ಮನೆಗಳಿಗೆ ನುಗ್ಗಿದ ನೀರು ಹಲವು ಮನೆಗಳಿಗೆ ನುಗ್ಗಿದ ಮಳೆ ನೀರು ಮಳೆ ನೀರಿನಿಂದ ನಿವಾಸಿಗಳು ಕಂಗಾಲಾಗಿದ್ದಾರೆ. ಕೆಲವರು ಕರೆಂಟ್ ಶಾಕ್ ನಿಂದ ಜಸ್ಟ್ ಮಿಸ್ ಆದ ಘಟನೆಗಳು ನಡೆದಿವೆ.











































ಇಲ್ಲಿನ ಸುಮಾರು ಐದಾರು ಮನೆಗಳಿಗೆ ನುಗ್ಗಿರೋ ಮಳೆ ನೀರು ಮನೆಗಳಲ್ಲಿರೋ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಸರಿಯಾದ ಸಮಯಕ್ಕೆ ಬಿಬಿಎಂಪಿ ಸಿಬ್ಬಂದಿಗಳು ಆಗಮಿಸದ ಹಿನ್ನೆಲೆಯಲ್ಲಿ ಇಲ್ಲಿನ ಜನರೇ ಮೋಟಾರ್ ಮೂಲಕ ನೀರು ಹೊರಹಾಕುತ್ತಿದ್ದಾರೆ.
ಸಂಚಾರ ವ್ಯತ್ಯಯ:
ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ನಗರದ ಹೊರ ಹೋಗುವ ಮತ್ತು ಒಳ ಬರುವ ವಾಹನಗಳು ನಿಧಾನಗತಿಯ ಸಂಚಾರ ಮಾಡುವಂತಾಗಿವೆ. ವಿದ್ಯಾಶಿಲ್ಪ ರೈಲ್ವೆ ಅಂಡರ್‌ಪಾಸ್ ನಿಂದ ಏರ್ಪೋಟ್್ರ ಕಡೆಗೂ ಸಂಚಾರ ನಿಧಾನ ವಾಗಿ ಸಾಗುತ್ತಿದೆ.ಎಲ್ಲೆಲ್ಲಿ ಸಂಚಾರಕ್ಕೆ ಅಡಚಣೆ: ಹೆಚ್‌ಎಸ್‌ಆರ್ ಲೇಔಟ್ ಡಿಪೋ ದಿಂದ 14 ನೇ ಮುಖ್ಯ ರಸ್ತೆಯ ಕಡೆ, ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ಆಡಚಣೆಯಾಗಿದೆ. ಶಿರಸಿ ವೃತ್ತದ ಬಳಿ ಮರ ಬಿದ್ದಿರುವುದರಿಂದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರ ಕಂಡು ಬರುತ್ತಿದೆ.
ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್, ಸೋನಿ ವರ್ಲ್ಡ್ ಸಿಗ್ನಲ್‌ನಿಂದ ಮಹಾರಾಜ ಸಿಗ್ನಲ್, ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು, ಲೌರಿ ರೈಲ್ವೆ ಅಂಡರ್‌ಪಾಸ್ ನಿಂದ ಮಹದೇವಪುರ, ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್, ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್, ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್, ಕೆನ್ಸಿ ಂಗ್ಟನ್ ನಿಂದ ಗುರುದ್ವಾರ, ಆಟೋ ಮಾರ್ಟ್ ನಿಂದ ಅಗರ, ಬನ್ನೇರುಘಟ್ಟ ರಸ್ತೆ ಯಿಂದ ಹುಳಿಮಾವು ಗೇಟ್, ರಾಷ್ಟೋತ್ಥಾನ ಸ್ಕೂಲ್ ಜಂಕ್ಷನ್ ನಿಂದ ಕೌಡ್-9 ಆಸ್ಪತ್ರೆ ಹಾಗೂ ಥಣಿಸಂದ್ರ ರಸ್ತೆಯಲ್ಲಿ ನಿಧಾನಗತಿಯ ವಾಹನ ಸಂಚಾರವಾಗುತ್ತಿದೆ.
ಮಳೆಗೆ ಸುಬ್ಬಯ್ಯ ಸರ್ಕಲ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಭಾರಿ ಮಳೆಗೆ ಸಿಸಿಬಿ ಕಚೇರಿ ಒಳಗೆ ನೀರು ನುಗ್ಗಿದೆ. ಕಚೇರಿ ಆವರಣ ಕೆರೆಯಂತಾಗಿದೆ. ಸಿಸಿಬಿ ಕಚೇರಿ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಡಬಲ್ ರೋಡ್‌ನಲ್ಲಿ ಮೊಣಕಾಲಿನವರೆಗು ನೀರು ನಿಂತಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಇದೇ ರೀತಿ ನಗರದ ಹಲವು ರಸ್ತೆಗಳ ಮೇಲೆ ನೀರು ನಿಂತಿದೆ. ಕೆಲವು ಗಂಟೆಗಳ ಕಾಲ ಸತತ ಸುರಿದ ಮಳೆಯಿಂದ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಜಲಾವೃತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್‌ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಬಳಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಕಿತ್ತು ಹೋಗಿರುವ ರಸ್ತೆಗಳು:
ಗ್ರೇಟರ್ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದ್ದು, ಕಿತ್ತುಹೋಗಿರುವ ರಸ್ತೆಗಳನ್ನು ಸರಿಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರ ಮಧ್ಯೆ ಬೆಸ್ಕಾಂ ಹಾಗೂ ಜಲ ಮಂಡಳಿಯವರು ಕಾಮಗಾರಿಗಳಿಗಾಗಿ ಎಲ್ಲೆಂದರಲ್ಲಿ ಗುಂಡಿ ಆಗೆದು ಹಾಗೆ ಬಿಟ್ಟಿರುವುದರಿಂದ ಗುಂಡಿಗಳಲ್ಲಿ ನೀರು ನಿಂತಿವೆ. ಒಂದು ವೇಳೆ ರಾತ್ರಿ ಸಮಯದಲ್ಲಿ ವಾಹನ ಸವಾರರು ಅಪ್ಪಿತಪ್ಪಿ ಇಂತಹ ಗುಂಡಿಗಳಿಗೆ ಬಿದ್ದರೆ ಅವರನ್ನು ಆ ದೇವರೇ ಕಾಪಾಡಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ದಾಖಲೆ ಮಳೆ:
ಕೆಂಗೇರಿ -132, ವಡೇರಹಳ್ಳಿ-131, ಚಿಕ್ಕಬಾಣಾವರ – 127, ಕೊಡತಿ – 125, ಸೋಮಶೆಟ್ಟಿಹಳ್ಳಿ-12, ಮಾದನಾಯಕನಹಳ್ಳಿ-119, ಮಾದಾವಾರ 106. ಯಲಹಂಕ – 103, ಕೊಡಿಗೆಹಳ್ಳಿ-109 ಮೀ.ಮೀ ಮಳೆಯಾಗಿದೆ.
ಭಾರಿ ಮಳೆ ಮುನ್ಸೂಚನೆ:
ಮುಂದಿನ 12 ಗಂಟೆಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಹೀಗಾಗಿ ಜನ ಮನೆ ಬಿಡುವ ಮುನ್ನ ಯೋಚಿಸಬೇಕಾಗುತ್ತದೆ. ಇಲ್ಲ ಅಂದರೆ ಮಳೆಯಲ್ಲಿ ಸಿಲುಕಿಕೊಂಡು ಮನೆಗೆ ಬರಲು ಪರದಾಡಬೇಕಾಗುತ್ತದೆ.ಎಚ್ಚರಿಕೆ: ಕೇವಲ ಎರಡು ಮಳೆಗೆ ಇಷ್ಟೆಲ್ಲಾ ಅನಾಹುತಗಳಾಗಲು ಬಿಬಿಎಂಪಿಯವರೇ ನಿರ್ಲಕ್ಷ್ಯವೇ ಕಾರಣ ಎಂದು ಸ್ವತಃ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಎಂದು ಆರೋಪಿಸಿದ್ದು, ಈ ಕೂಡಲೆ ಆಗಿರುವ ಅನಾಹುತಗಳನ್ನು ಸರಿಪಡಿಸುವುದರ ಜೊತೆಗೆ ಮತ್ತೆ ಅನಾಹುತ ಸಂಭವಿಸದಂತೆ ಎಚ್ಚರವಹಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ತರಾಟೆ:
ಮಳೆ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಹಾಗೂ ಬಿಡಿಎ ಆಯುಕ್ತ ಜಯರಾಮ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ಸಾಗಿದ್ದಾರೆ. ಗೆದ್ದಲಹಳ್ಳಿಗೆ ಭೇಟಿ ನೀಡಿ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳಿಂದ ತುಷಾರ್ ಗಿರಿನಾಥ್ ಮಾಹಿತಿ ಪಡೆದುಕೊಳ್ಳುತ್ತಿದ್ದರು ಆ ಸಂದರ್ಭದಲ್ಲಿ ಅಲ್ಲಿನ ಜನ ಮನೆ ತುಂಬಾ ನೀರು ತುಂಬಿದೆ ಏನಾದರೂ ಮಾಡಿ ಎಂದು ಜೋರಾಗಿ ಕೂಗಿ ಮನವಿ ಮಾಡಿದರು.
ಆಗ ತುಷಾರ್ ಗಿರಿನಾಥ್ ಅವರು, ಗೆದ್ದಲಹಳ್ಳಿಯಲ್ಲಿ ನದ್ದು ವೆಂಟ್ ಸೈಜ್ ಕಡಿಮೆ ಇದೆ. ಹಾಗಾಗಿ ನೀರು ಹೋಗಲು ವ್ಯವಸ್ಥೆ ಇಲ್ಲ. ಈ ಹಿಂದೆ ಮಳೆ ಬಂದಾಗ ಅಲ್ಲಲ್ಲಿ ನೀರು ಹೋಗ್ತಿತ್ತು. ಈ ಬಾರಿ ಎಲ್ಲಾ ಕಡೆ ಕ್ಲಿಯರ್ ಆಗಿದೆ. ಎಲ್ಲವನ್ನೂ ಇಲ್ಲಿಂದ ಶಿಫ್ಟ್ ಮಾಡ್ತಿವಿ. ಊಟ. ನೀರು,ಹಾಲು ವ್ಯವಸ್ಥೆ ಮಾಡ್ತಿವಿ. ಮನೆಯಲ್ಲಿರುವವರನ್ನು ಮನೆಯಿಂದ ಬೇರೆ ಕಡೆ ಶಿಫ್ಟ್ ಮಾಡ್ತಿವಿ.
ನೀರು ಹೋಗಲು ಇನ್ನೂ ರೈಲ್ವೆ ಇಲಾಖೆ ಅನುಮತಿ ಕೊಟ್ಟಿಲ್ಲ. ಬಿಡಿಎ ಕಾಮಗಾರಿ ಮಾಡ್ತಿದೆ ಆದರೆ ಜಾಗದ ಮಾಲೀಕರು ಕೋರ್ಟ್ ಗೆ ಹೋಗಿದ್ದಾರೆ ಇದರಿಂದ ಸಮಸ್ಯೆ ಹೆಚ್ಚಾಗಿದೆ ಎಂದಾಗ ಜನ ಅವರ ವಿರುದ್ಧ ತಿರುಗಿಬಿದ್ದಾಗ ಇಬ್ಬರು ಅಧಿಕಾರಿಗಳು ವಾಪಸ್ ಹೋಗುವಂತಾಯಿತು.