ಬೆಂಗಳೂರು, ಮೇ 19– ಹೈದ್ರಾಬಾದ್ ಭೀಕರ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಕಡೆ ಮುಂಜಾಗ್ರತವಾಗಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುವಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಸನ್ನಿವೇಶ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆಯಷ್ಟೇ ಅಣಕು ಪ್ರದರ್ಶನವನ್ನು ನಡೆಸಲಾಯಿತು. ಎತ್ತರದ ಕಟ್ಟಡ ಸೇರಿದಂತೆ ಎಲ್ಲೆಲ್ಲಿ ಸೂಕ್ಷ ಪರಿಸ್ಥಿತಿಗಳಿವೆ, ಶಾರ್ಟ್ಸ್ಕ್ಯೂ್ರಟ್ ಸೇರಿದಂತೆ ಇತರ ಅಪಾಯಕಾರಿ ಸನ್ನಿವೇಶಗಳಿರುವ ಕಡೆಗೆ ಪ್ರದೇಶವಾರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ವಾಕಿಸ್ತಾನದ ಪ್ರಜೆಗಳು ರಾಜ್ಯದಲ್ಲಿದ್ದರೆ ಅವರನ್ನು ಪತ್ತೆ ಹಚ್ಚಿ ವಾಪಸ್ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕೆಲವರನ್ನು ಗುರುತಿಸಿ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದ ಸಾಕಷ್ಟು ಸಮಸ್ಯೆಯಾಗಿದೆ. ಜನರಿಗೆ ತೊಂದರೆಯಾಗಿದೆ. ದಕ್ಷಿಣದಿಂದ ಉತ್ತರ ಭಾಗಕ್ಕೆ ಸಂಚರಿಸಲು ಕಷ್ಟವಾಗುತ್ತಿದೆ. ಸಿಲ್ಕ್ ಬೋರ್ಡ್ ಬಳಿ ಜಲಾವೃತವಾಗಿದೆ. ಸಂಚಾರಿದಟ್ಟಣೆ ಹೆಚ್ಚಾಗಿದೆ ಎಂದರು.
ಬಿಬಿಎಂಪಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಬಹಳಷ್ಟು ಕಡೆ ವೈಟ್ ಟ್ಯಾಪಿಂಗ್ ಹಾಗೂ ರಿಪೇರಿ ಕೆಲಸಗಳು ನಡೆಯುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ಡೆಬ್ರಿಜ್ ಗಳನ್ನು ತೆರವುಗೊಳಿಸಬೇಕಿತ್ತು.
ಕೆಳಹಂತದ ಪ್ರದೇಶಗಳಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಜಂಟಿ ಆಯುಕ್ತರು ಆಯಾ ಪ್ರದೇಶದಲ್ಲಿ ಮಳೆಗಾಲಕ್ಕೂ ಮುನ್ನವೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಆಯುಕ್ತರು ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಕೇಳಿದ್ದೇನೆ. ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಮಳೆನೀರು ನಿಂತಿರುವ ಕಡೆಗೆ ಅದನ್ನು ತೆರವು ಮಾಡಲು ಬಿರುಸಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲೆ, ಪ್ಲಾಸ್ಟಿಕ್, ಬೇರೆಬೇರೆ ತ್ಯಾಜ್ಯಗಳು ಎಲ್ಲೆಂದರಲ್ಲಿ ಸಿಲುಕಿ ನೀರು ಹರಿಯದೆ ತೊಂದರೆಯಾಗುತ್ತಿದೆ. ವಿರೋಧಪಕ್ಷಗಳು ಟೀಕೆ ಮಾಡುವುದು ಸಾಮಾನ್ಯ ಎಂದು ಹೇಳಿದರು.
ಮಳೆಯಿಂದ ಬೆಂಗಳೂರಿನ ಜನ ಸಂತ್ರಸ್ತರಾಗಿದ್ದು, ಕಾಂಗ್ರೆಸ್ ಸಮಾವೇಶ ಬೇಕೇ? ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಅವರು, ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿಲ್ಲ. ಹೊಸಪೇಟೆಯಲ್ಲಿ ಆಯೋಜಿಸಲಾಗಿದೆ. ಅದು ಮೊದಲೇ ಪೂರ್ವನಿಗದಿಯಾಗಿತ್ತು ಎಂದರು.
ನಿಗಮ ಮಂಡಳಿಗಳಿಗೆ ಸದಸ್ಯರ ನೇಮಕಾತಿಗೆ ಶೀಘ್ರವೇ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ತಮ್ಮ ನೇತೃತ್ವದಲ್ಲಿನ ಸಮಿತಿ ಕಾರ್ಯಕರ್ತರ ಪಟ್ಟಿಯನ್ನು ಈಗಾಗಲೇ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿಯಾಗಿದೆ ಎಂದು ಹೇಳಿದರು.
ತುಮಕೂರು-ಬೆಂಗಳೂರು ನಡುವೆ ಮೆಟ್ರೋ ರೈಲ್ವೆ ಯೋಜನೆ ನಿರ್ಮಾಣವಾದರೆ ಕೈಗಾರಿಕೆಗಳಿಗೆ ಅನುಕೂಲವಾಗುವ ಜೊತೆಗೆ ಬೆಂಗಳೂರಿನ ಒತ್ತಡವೂ ಕಡಿಮೆಯಾಗಲಿದೆ. ಅಲ್ಲಿ ಬೃಹತ್ ಕೈಗಾರಿಕಾ ವಸಾಹತು ನಿರ್ಮಾಣವಾಗಿದೆ. ಹೀಗಾಗಿ ಪ್ರತಿನಿತ್ಯ ಲಕ್ಷಾಂತರ ಮಂದಿ ಸಂಚರಿಸುತ್ತಿದ್ದಾರೆ.
ಮೆಟ್ರೋ ಯೋಜನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಡಿಪಿಎಆರ್‌ಗೆ ತಯಾರಿಗಳು ನಡೆಯುತ್ತಿವೆ. ಹೆದ್ದಾರಿ ಪಕ್ಕದಲ್ಲೇ ಮೆಟ್ರೋ ಬೇಕೇ? ಅಥವಾ ಬೇರೆ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕೇ?, ಹಣಕಾಸಿನ ಸಾಧುತ್ವ ಎಲ್ಲವೂ ಪರಿಶೀಲನೆಯಾಗುತ್ತಿದೆ.
ಬೆಂಗಳೂರಿನ ಇಬ್ಬರು ಸದಸ್ಯರು ತುಮಕೂರು ಮೆಟ್ರೋಗೆ ವಿರೋಧ ವ್ಯಕ್ತಪಡಿಸಿ ಮೂರ್ಖತನದ ಯೋಜನೆ ಎಂದಿದ್ದಾರೆ. ಬಹುಷಃ ಅವರಿಗೆ ಸರಿಯಾಗಿ ಅರ್ಥವಾದಂತಿಲ್ಲ. ಲಂಡನ್, ನ್ಯೂಯಾರ್ಕ್, ಟೋಕಿಯೊ ಸೇರಿದಂತೆ ದೊಡ್ಡದೊಡ್ಡ ನಗರಗಳಿಂದ ದೂರದ ಊರುಗಳಿಗೆ ಮೆಟ್ರೋ ಸಂಪರ್ಕಗಳಿದೆ. ಅದನ್ನು ಅರ್ಥ ಮಾಡಿಕೊಂಡು ಬೆಂಗಳೂರಿನ ಸಂಸದರು ಸಹಕರಿಸಬೇಕು ಎಂದರು.
ಸೋಮಣ್ಣ ಬೆಂಗಳೂರಿನವರು. ತುಮಕೂರಿನ ಸಂಸದರಾಗಿದ್ದಾರೆ. ಅವರಿಗೂ ಮೆಟ್ರೋ ಬೇಕು ಎಂದು ಅರ್ಥವಾಗಿದೆ. ತುಮಕೂರಿಗಂತೂ ಮೆಟ್ರೋ ಬೇಕೇಬೇಕು. ಇದರಲ್ಲಿ ಜನರಿಗೆ ಅನುಕೂಲ ಮಾಡಿಕೊಡುವುದನ್ನು ಹೊರತುಪಡಿಸಿದರೆ ಬೇರೆ ಯಾವುದೇ ದುರುದ್ದೇಶವಿಲ್ಲ ಎಂದರು.
ಎರಡನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಿಡದಿ ಅಥವಾ ನೆಲಮಂಗಲ ಸ್ಥಳಗಳನ್ನು ಪ್ರಸ್ತಾವನೆ ಮಾಡಲಾಗಿದೆ. ದಾಬಸ್ ಪೇಟೆ-ದೇವನಹಳ್ಳಿ ನಡುವೆ 5 ಸಾವಿರ ಎಕರೆಯಲ್ಲಿ ಕ್ಲೀನ್ ಸಿಟಿ ನಿರ್ಮಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಗೆ ಮೆಟ್ರೋ ಯೋಜನೆ ಪಿಪಿಟಿ ಮಾದರಿಯಲ್ಲಿ ನಿರ್ಮಾಣವಾಗಬೇಕು ಎಂದು ಹೇಳಿದರು.