ಬೆಂಗಳೂರು,ಮೇ 19- ನಗರದಲ್ಲಿ ಮಳೆಯಿಂದಾಗಿ ಜನವಸತಿ ಪ್ರದೇಶಗಳು ಮುಳುಗಡೆಯಾಗಿರುವುದು ಹೊಸ ಸಮಸ್ಯೆಯಲ್ಲ. ಆದರೆ ಇದಕ್ಕೆ ನಮ್ಮ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ತಮ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿರುವ ಅವರು, ಭಾರಿ ಮಳೆಯಿಂದ ಬೆಂಗಳೂರಿನಲ್ಲಾಗಿರುವ ಸಮಸ್ಯೆಗಳ ಬಗ್ಗೆ ತೀವ್ರ ಕಳವಳ ಇದೆ. ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಹತ್ತಿರದಿಂದ ನಿಗಾ ವಹಿಸುತ್ತಿದ್ದೇನೆ ಎಂದಿದ್ದಾರೆ.
ಬೆಂಗಳೂರಿನ ಸವಾಲುಗಳು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಾನು ಸದಾ ಬದ್ಧನಾಗಿದ್ದೇನೆ. ಬಿಬಿಎಂಪಿಯ ವಾರ್ ರೂಂ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.
ಜನಾಕ್ರೋಶ ಹಾಗೂ ವಿಪಕ್ಷಗಳ ಟೀಕೆಯ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಇದ್ಯಾವುದೂ ಹೊಸ ಸಮಸ್ಯೆಯಲ್ಲ. ಹಲವು ವರ್ಷಗಳಿಂದ ಎಲ್ಲಾ ಸರ್ಕಾರಗಳು, ಆಡಳಿತ ವ್ಯವಸ್ಥೆಗಳು ನಿರ್ಲಕ್ಷಿಸಿದ್ದರಿಂದಾಗಿ ಸಮಸ್ಯೆ ಜಾಸ್ತಿಯಾಗಿವೆ. ವ್ಯತ್ಯಾಸವೇನೆಂದರೆ ನಾವು ಇದಕ್ಕೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯುವ ಬದಲು ದೂರಗಾಮಿ ಪರಿಹಾರ, ಸುಸ್ಥಿರತೆ ಹಾಗೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ನಾನೂ ಕೂಡ ಬೆಂಗಳೂರಿಗರಲ್ಲಿ ಒಬ್ಬ. ಜನರ ಆತಂಕ ಮತ್ತು ಹತಾಶೆಗಳು ನನಗೆ ಅರ್ಥವಾಗುತ್ತವೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಿಮೊಂದಿಗೆ ನಾನಿದ್ದೇನೆ ಎಂದು ಅವರು ಭರವಸೆ ನೀಡಿದ್ದಾರೆ.