Tuesday, May 20, 2025
Homeಜಿಲ್ಲಾ ಸುದ್ದಿಗಳು | District Newsಸಾಲೂರು ಬೃಹನ್ಮಠ ಗುರುಸ್ವಾಮಿಜಿ ಲಿಂಗೈಕ್ಯ

ಸಾಲೂರು ಬೃಹನ್ಮಠ ಗುರುಸ್ವಾಮಿಜಿ ಲಿಂಗೈಕ್ಯ

Salur Brihanmatha Guruswamiji passed Away

ಹನೂರು, ಮೇ 20- ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹ್ಮಠದ ಪಟ್ಟದ ಗುರುಸ್ವಾಮಿಗಳು ಇಂದು ಮುಂಜಾನೆ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಠಕ್ಕೆ ಕರೆದುಕೊಂಡು ಬರಲಾಗಿತ್ತು. ಶ್ರೀಗಳು ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಆರೋಗ್ಯದಲ್ಲಿ ಏರುಪೇರಾಗಿ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ ಗುರುಸ್ವಾಮಿಗಳ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ. ಸುದ್ದಿ ತಿಳಿದು ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಗುರುಸ್ವಾಮಿ ಅವರ ಅಂತಿಮ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳು ನಿಧನರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು.

ಶ್ರೀಗಳು ಸಾಲೂರು ಬೃಹನ್ಮಠದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ, ಭಕ್ತಾದಿಗಳಿಗೆ ದಾಸೋಹ ಕಲ್ಪಿಸುವ ಮೂಲಕ ಶ್ರೀಕ್ಷೇತ್ರದ 77 ಮಲೆಗಳ ಇತಿಹಾಸ ಪ್ರಸಿದ್ಧ ಹೊಂದಿರುವ ಕಾರ್ಮಿಕ ಸ್ಥಳದ ಜನತೆಗೆ ದಾರಿ ದೀಪವಾಗಿದ್ದರು ಎಂದು ಸ್ಮರಿಸಿದರು.

ಶ್ರೀಗಳು ನಮ್ಮ ತಾಲೂಕಿನ ಜಿ.ಕೆ.ಹೊಸೂರು ಗ್ರಾಮದಲ್ಲಿ ಜನಿಸಿ ಮಾದಪ್ಪನ ನೆಲದಲ್ಲಿ ಮಠಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಸೇರಿದಂತೆ ರಾಜ್ಯ ಅಲ್ಲದೆ ವಿವಿಧ ಅನ್ಯ ರಾಜ್ಯಗಳಿಂದ ಬರುವ ಭಕ್ತಾದಿಗಳು ಸಹ ಗುರುಸ್ವಾಮಿಗಳು ಎಂದೆ ಗುರುತಿಸುವ ಮೂಲಕ ಮಠ ಮತ್ತು ತಾಲೂಕಿನ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ದಾರಿ ದೀಪವಾಗಿದ್ದ ಪಟ್ಟದ ಗುರುಸ್ವಾಮಿಗಳು ನಮ್ಮನ್ನ ಅಗಲಿ ಲಿಂಗೈಕ್ಯರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಬಳಿಕ ಮುಂದಿನ ಪೂರ್ವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.

RELATED ARTICLES

Latest News