Wednesday, May 21, 2025
Homeರಾಷ್ಟ್ರೀಯ | Nationalಖ್ಯಾತ ಖಗೋಳ ಭೌತಶಾಸ್ತ್ರಜ್ಞ, ವಿಜ್ಞಾನ ಸಂವಹನಕಾರ ವಿಷ್ಣು ನಾರ್ಲಿಕರ್ ನಿಧನ

ಖ್ಯಾತ ಖಗೋಳ ಭೌತಶಾಸ್ತ್ರಜ್ಞ, ವಿಜ್ಞಾನ ಸಂವಹನಕಾರ ವಿಷ್ಣು ನಾರ್ಲಿಕರ್ ನಿಧನ

Noted astrophysicist Jayant Narlikar passes away at 87

ಪುಣೆ, ಮೇ20 -ಖ್ಯಾತ ಖಗೋಳ ಭೌತಶಾಸ್ತ್ರಜ್ಞ, ವಿಜ್ಞಾನ ಸಂವಹನಕಾರ ಮತ್ತು ಪದ್ಮವಿಭೂಷಣ ಪುರಸ್ಕೃತ ಡಾ.ಜಯಂತ್ (87) ವಿಷ್ಣು ನಾರ್ಲಿಕರ್ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. ಅವರು ಮಲಗಿದ ವೇಳೆಯೇ ಕೊನೆಯುಸಿರೆಳೆದರೆಂದು ಎಂದು ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ. ಮೃತರಿಗೆ ಮೂವರು ಹೆಣ್ಣುಮಕ್ಕಳು ಇದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ನಾಲಿರ್ಕರ್ ಅವರು ಹಲವಾರು ವಿಜ್ಞಾನ ಪುಸ್ತಕಗಳು ಮತ್ತು ಲೇಖನಗಳನ್ನು ಬರೆದಿದ್ದಾರೆ. ಆಕರ್ಷಕ ವೈಜ್ಞಾನಿಕ ಕಾದಂಬರಿ ಬರವಣಿಗೆಗೆ ಹೆಸರುವಾಸಿಯಾಗಿದ್ದರು. ದೂರದರ್ಶನ ಮತ್ತು ರೇಡಿಯೋ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ತಲುಪಿ, ಸಂಕೀರ್ಣ ವೈಜ್ಞಾನಿಕ ಪರಿಕಲ್ಪನೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ್ದರು.

1938ರ ಜುಲೈ 19ರಂದು ಜನಿಸಿದ ಅವರು, ತಮ್ಮ ಬಾಲ್ಯವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) ಕ್ಯಾಂಪಸ್‌ನಲ್ಲಿ ಕಳೆದಿದ್ದರು. ಅಲ್ಲಿ ಅವರ ತಂದೆ ವಿಷ್ಣು ವಾಸುದೇವ ನಾರ್ಲಿಕರ್ ಗಣಿತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರಿಗೆ ಟೈಸನ್ ಪದಕವನ್ನು ನೀಡಲಾಯಿತು ಮತ್ತು ಗಣಿತ ಟ್ರಿಪೋಸ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ರಾಂಗ್ಲರ್ ಎಂದು ಗುರುತಿಸಲ್ಪಟ್ಟರು.

ವಿಶ್ವವಿಜ್ಞಾನ ಮತ್ತು ವಿಜ್ಞಾನದ ಜನಪ್ರಿಯತೆಯಲ್ಲಿ ಪ್ರವರ್ತಕರಾಗಿದ್ದನಾರ್ಲಿಕರ್, ಪ್ರಮುಖ ವೈಜ್ಞಾನಿಕ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮತ್ತು ಸಂಶೋಧಕರ ಪೀಳಿಗೆಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ, ನಾರ್ಲಿಕರ್ 1972 ರಲ್ಲಿ ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸೇರಿದ್ದರು. 1989ರವರೆಗೆ ಸೈದ್ಧಾಂತಿಕ ಖಗೋಳ ಭೌತಶಾಸ್ತ್ರ ಗುಂಪನ್ನು ಮುನ್ನಡೆಸಿದರು. ಆ ಸಮಯದಲ್ಲಿ ಗುಂಪು ಅಂತಾರಾಷ್ಟ್ರೀಯ ಮನ್ನಣೆಯನ್ನು ಗಳಿಸಿತು.

1988ರಲ್ಲಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಗರದ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರ-ವಿಶ್ವವಿದ್ಯಾಲಯ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರಕೇಂದ್ರ (ಐಯುಸಿಎಎ) ಸ್ಥಾಪಿಸುವ ಕೆಲಸವನ್ನು ಅವರಿಗೆ ವಹಿಸಿತು. ಸ್ಥಾಪಕ ನಿರ್ದೇಶಕರಾಗಿ, ಅವರು 2003 ರಲ್ಲಿ ನಿವೃತ್ತರಾಗುವವರೆಗೂ ಐಯುಸಿಎಎಯನ್ನು ಮುನ್ನಡೆಸಿದರು.

ಅಂದಿನಿಂದ ಈ ಕೇಂದ್ರವು ಖಗೋಳಶಾಸ್ತ್ರದಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ಜಾಗತಿಕವಾಗಿ ಗೌರವಾನ್ವಿತ ಕೇಂದ್ರವಾಗಿದೆ. ಅವರು ಎಮೆರಿಟಸ್ ಪ್ರಾಧ್ಯಾಪಕರಾಗಿ ಐಯುಸಿಎಎ ಜೊತೆ ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಡಾ. ನಾರ್ಲಿಕರ್ ಅವರ ಸಂಶೋಧನೆ ಮತ್ತು ವಿಜ್ಞಾನ ಸಂಪರ್ಕ ಎರಡಕ್ಕೂ ಅಂತರರಾಷ್ಟ್ರೀಯ ಮನ್ನಣೆ ದೊರೆಕಿದೆ. 2012ರಲ್ಲಿ, ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ಅವರನ್ನು ವಿಜ್ಞಾನದಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸೃಷ್ಟಿಸಿದ್ದಕ್ಕಾಗಿ ಗೌರವಿಸಿತ್ತು. ಇದಕ್ಕೂ ಮೊದಲು, 1996ರಲ್ಲಿ ಜನಪ್ರಿಯ ವಿಜ್ಞಾನ ಬರವಣಿಗೆ ಮತ್ತು ಸಂವಹನಕ್ಕೆ ನೀಡಿದ ಕೊಡುಗೆಗಳಿಗಾಗಿ ಯುನೆಸ್ಕೋ ಅವರಿಗೆ ಕಳಿಂಗ ಪ್ರಶಸ್ತಿಯನ್ನು ನೀಡಿತ್ತು.

1965ರಲ್ಲಿ ಕೇವಲ 26ನೇ ವಯಸ್ಸಿನಲ್ಲಿ ನಾರ್ಲಿಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2004 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು, 2011ರಲ್ಲಿ, ಮಹಾರಾಷ್ಟ್ರ ಸರ್ಕಾರವು ಅದರ ಅತ್ಯುನ್ನತ ನಾಗರಿಕ ಗೌರವವಾದ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಮರಾಠಿಯಲ್ಲಿ ಬರೆದ ಅವರ ಆತ್ಮಚರಿತ್ರೆಯು 2014ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ಅವರನ್ನು ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ 2021ರಲ್ಲಿ ನಾಸಿಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

RELATED ARTICLES

Latest News