Wednesday, May 21, 2025
Homeಬೆಂಗಳೂರುಬೆಂಗಳೂರಲ್ಲಿ ನಿಲ್ಲದ ಮಳೆಯ ಅಬ್ಬರ, ಬಹುತೇಕ ಪ್ರದೇಶಗಳು ಜಲಾವೃತ, ಜನಜೀವನ ತತ್ತರ

ಬೆಂಗಳೂರಲ್ಲಿ ನಿಲ್ಲದ ಮಳೆಯ ಅಬ್ಬರ, ಬಹುತೇಕ ಪ್ರದೇಶಗಳು ಜಲಾವೃತ, ಜನಜೀವನ ತತ್ತರ

Bengaluru experiences heavy rainfall, causing flooding

ಬೆಂಗಳೂರು, ಮೇ.20- ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಸಿಲಿಕಾನ್‌ ಸಿಟಿಯ ಜನ ಹೈರಾಣಾಗಿದ್ದಾರೆ. ನಗರದಲ್ಲಿ ಎಲ್ಲಿ ನೋಡಿದರೂ ಕೆರೆ, ನದಿಗಳು ಉದ್ಭವವಾಗಿವೆ.ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಸಾಯಿಲೇಔಟ್‌, ವಡ್ಡರಪಾಳ್ಯ ಮುಖ್ಯರಸ್ತೆ, ಕಾವೇರಿ ನಗರ, ಕೆ.ಆರ್‌. ಮಾರುಕಟ್ಟೆ, ಮಡಿವಾಳ ಮೇಲ್ಸೇತುವೆ, ಹೆಣ್ಣೂರು ಕ್ರಾಸ್‌‍, ಹೆಚ್‌ಎಸ್‌‍ಆರ್‌ ಬಡಾವಣೆ ಮತ್ತಿತರ ಕೆಲವು ಪ್ರದೇಶಗಳು ಜಲಾವೃತವಾಗಿವೆ.ಮತ್ತೆ ಜಲಾಪ್ರವಾಹಕ್ಕೆ ಸಿಲುಕಿದ ಈ ಭಾಗದ ಜನ ನಿನ್ನೆ ಇಡೀ ದಿನ ನೀರನ್ನು ಖಾಲಿ ಮಾಡಿಸಲು ಸರ್ಕಸ್‌‍ ಮಾಡಬೇಕಾಯಿತು.

ಮಡಿವಾಳದ ಅಯ್ಯಪ್ಪ ಅಂಡರ್‌ ಪಾಸ್‌‍ ಜಲಾವೃತಗೊಂಡಿದೆ. ಹೊಸೂರು ಮುಖ್ಯರಸ್ತೆಯಲ್ಲಿ ಬೆಂಗಳೂರಿನ ಹೊರಭಾಗಕ್ಕೆ ಹೋಗುವ ಮತ್ತು ನಗರದ ಒಳಭಾಗದ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ.ಅಂಡರ್‌ ಪಾಸ್‌‍ನಲ್ಲಿ ಹೋಗಲಾಗದೆ ದ್ವಿ ಚಕ್ರ ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯ ನಡುವೆಯೇ ದ್ವಿಚಕ್ರ ಸವಾರರು ಸಂಚಾರ ಮಾಡಬೇಕಾಯಿತು. ರಸ್ತೆಗಳಲ್ಲಿ ನಿಂತ ನೀರಿನಿಂದಾಗಿ ಕೆಲವು ಕಡೆ ಗುಂಡಿಗಳಿದ್ದರೂ ಗೊತ್ತಾಗದೆ ವಾಹನ ಸವಾರರು ತಮ ವಾಹನಗಳನ್ನು ಗುಂಡಿಗಿಳಿಸಿ ಪರದಾಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು.

ಸಾಯಿ ಲೇಔಟ್‌ನಲ್ಲಿ ಇನ್ನು ಕೆಲವೆಡೆ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮತ್ತೆ ಮಳೆ ಬರೋ ಸೂಚನೆ ಇರೋದರಿಂದ ನೀರಿನ ಮಟ್ಟ ಏರಿಕೆಯಾಗೋ ಆತಂಕದಲ್ಲಿ ನಿವಾಸಿಗಳು ಕಾಲ ಕಳೆಯುವಂತಾಗಿದೆ. ಹೀಗಾಗಿ ಸ್ಥಳದಲ್ಲೇ ಅಗ್ನಿಶಾಮಕ ದಳ, ಆ್ಯಂಬುಲೆನ್‌್ಸ, ರಾಜ್ಯ ವಿಪತ್ತು ನಿರ್ವಹಣಾ ತಂಡ, ಬೋಟ್‌ ಗಳ ಸಹಿತ ಬಿಬಿಎಂಪಿ ಸಿಬ್ಬಂದಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ಆರೋಗ್ಯ ಸಮಸ್ಯೆ;
ಪ್ರವಾಹದ ಹಿನ್ನೆಲೆಯಲ್ಲಿ ಸಾಯಿಲೇಔಟ್‌ ನಿವಾಸಿಗಳಿಗೆ ನಾನಾ ಬಗೆಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.ಶೀತ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಯಿ ಲೇಔಟ್‌ ನಿವಾಸಿಗಳಿಗೆ ತುರ್ತು ಔಷಧಿ ನೀಡಲು ಬಿಬಿಎಂಪಿ ಆರೋಗ್ಯ ಸಿಬ್ಬಂದಿಗಳು ಮುಂದಾಗಿದ್ದಾರೆ.

ಔಷಧಿ, ರೋಗನಿರೋಧಕ ಚುಚ್ಚುಮದ್ದು ಸೇರಿದಂತೆ ಹಲವು ಬಗೆಯ ಔಷಧಿ ಪೂರೈಕೆ ಮಾಡಲಾಗುತ್ತಿದೆ. ಮಕ್ಕಳಿಗೆ ವಿಶೇಷವಾಗಿ ಔಷಧಿ ನೀಡುವ ಉದ್ದೇಶದಿಂದ ಬಿಬಿಎಂಪಿ ವೈದ್ಯರನ್ನು ನಿಯೋಜಿಸಲಾಗಿದೆ.

ಹಾವುಗಳ ಕಾಟ:
ಸಾಯಿ ಲೇ ಔಟ್‌ ನಲ್ಲಿ ನೀರು ಇಳಿಯುತ್ತಿದ್ದಂತೆ ಹಾವುಗಳ ಕಾಟ ಕಾಣಿಸಿಕೊಂಡಿದೆ. ಮನೆಗಳಲ್ಲಿ ಹಾವಿನ ಮರಿಗಳು ಪತ್ತೆಯಾಗುತ್ತಿದ್ದು, ಹಾವಿನ ಮರಿಗಳನ್ನ ಹಿಡಿಯಲು ಉರಗ ತಜ್ಞರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.ಸಾಯಿ ಲೇಔಟ್‌ ಪೂರ್ತಿ ನೀರಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ ಮೂಲಕ ಆಹಾರ, ನೀರು ಸರಬರಾಜು ಮಾಡಲಾಗುತ್ತಿದೆ.

ಜೆಸಿಬಿ ಮೂಲಕ ಟೆರಸ್‌‍ ಗೆ ಊಟ, ನೀರನ್ನು ಬಿಬಿಎಂಪಿ ಸಿಬ್ಬಂದಿಗಳು ಸರಬರಾಜು ಮಾಡುತ್ತಿದ್ದಾರೆ.ನಗರದ ಬಹುತೇಕ ಪ್ರದೇಶಗಳಲ್ಲಿ ರಾತ್ರಿಯಿಡಿ ಮಳೆಯಾದ ಪರಿಣಾಮ ಎಲ್ಲಿ ನೋಡಿದ್ರು ಕೆರೆ, ನದಿಗಳು ಉದ್ಭವವಾಗಿವೆ. ಕೇವಲ ಎರಡು ದಿನ ಸುರಿದ ಮಳೆಗೆ ನಗರದ ರಾಜಕಾಲುವೆಗಳು ನದಿಯಂತೆ ಉಕ್ಕಿ ಹರಿಯುತ್ತಿವೆ. ಯಲಚೇನ ಹಳ್ಳಿಯ ಉಮರ್‌ ರಸ್ತೆಯಂತೂ ಥೇಟ್‌ ಕೆರೆಯಂತೆ ಪರಿವರ್ತನೆಯಾಗಿತ್ತು.

ಕೆ ಆರ್‌ ಮಾರ್ಕೆಟ್‌ಯಲ್ಲಿ ಮಳೆ ತಂದಿಟ್ಟ ಅವಾಂತರಕ್ಕೆ ಹೂವು ವ್ಯಾಪಾರಿಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಸಾವಿರ ಸಾವಿರ ಮೌಲ್ಯದ ಹೂವು ಮಳೆಯಿಂದ ಹಾನಿಗೊಳಗಾಗಿ ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿತ್ತು.ಕಳೆದ ಹತ್ತಾರು ವರ್ಷಗಳಿಂದ ನಾವು ಹೂ ವ್ಯಾಪಾರ ಮಾಡುತ್ತೇವೆ. ಪ್ರತೀ ಬಾರಿ ಈ ಪರಿಸ್ಥಿತಿ ಎದುರಾದರೂ ಯಾವುದೇ ಪರಿಹಾರವಿಲ್ಲ. ಹೀಗಾದಾರೆ ನಾವು ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಿಗಳು ಗೋಳಾಡುತ್ತಿದ್ದಾರೆ.

ಇನ್ನು ಕೆ ಆರ್‌ ಮಾರ್ಕೆಟ್‌ ಪಾರ್ಕಿಂಗ್‌ ಜಾಗದ ದುಸ್ಥಿತಿ ನೋಡೋಕ್ಕಾಗಲ್ಲ. ಬೇಸ್‌‍ಮೆಂಟ್‌ ಪಾರ್ಕಿಂಗ್‌ನಲ್ಲಿ ಎದೆ ಮಟ್ಟದ ನೀರು ನಿಂತಿರುವುದರಿಂದ ನೂರಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ವ್ಯಾಪರಸ್ಥರ ತಳ್ಳುಗಾಡಿ ಸೇರಿದಂತೆ ಎಲ್ಲವೂ ಜಲಾವೃತವಾಗಿವೆ. ಮಾರುಕಟ್ಟೆಯ ಎಲ್ಲ ಕಡೆ ನೀರು ನಿಂತ ಪರಿಣಾಮ ಇಡಿ ಪ್ರದೇಶ ಕೊಳಚೆ ಪ್ರದೇಶವಾಗಿ ಪರಿವರ್ತನೆಯಾಗಿದೆ.

ಸಂಚಾರ ಬಂದ್‌; ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೇಲ್ಸೇತುವೆಯಲ್ಲಿ ನೀರು ನಿಂತಿರುವುದರಿಂದ ಈ ಭಾಗದ ಸಂಚಾರ ಬಂದ್‌ ಮಾಡಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮನಹಳ್ಳಿ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಬಂದ್‌ ಆಗಿರುವುದರಿಂದ ಪ್ಲೈಓವರ್‌ ಕೆಳಗಡೆ ಕಿ.ಮೀಗಟ್ಟಲೆ ಟ್ರಾಫಿಕ್‌ ಜಾಮ್‌‍ ಉಂಟಾಗಿದೆ.

ಪವರ್‌ಕಟ್‌; ನಿನ್ನೆ ಕರೆಂಟ್‌ ಶಾಕ್‌ ಹೊಡೆದು ಇಬ್ಬರು ಮೃತಪಟ್ಟಿರುವ ಬಿಟಿಎಂ ಬಡಾವಣೆಯ ಮಧುವನ ಅಪಾರ್ಟ್‌ಮೆಂಟ್‌ಗೆ ಕಲ್ಪಿಸುವ ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿ ಮೈಕೋ ಲೇಔಟ್‌ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ.

ಬಿಟಿಎಂ ಲೇ ಔಟ್‌ ಎರಡನೇ ಹಂತದ ಎನ್‌ ಎಸ್‌‍ ಪಾಳ್ಯದ ಮಧುವನ್‌ ಅಪಾರ್ಟ್‌ಮೆಂಟ್‌ ಬೇಸ್‌‍ ಮೆಂಟ್‌ ನಲ್ಲಿ ಮಳೆ ನೀರು ಸಂಗ್ರಹ ಆಗಿತ್ತು. ಮೋಟಾರ್‌ ಮೂಲಕ ನೀರು ತೆರವು ಮಾಡಲು ಹೋಗಿ ಎಲೆಕ್ಟ್ರಿಕ್‌ ಶಾಕ್‌ ಹೊಡೆದು ಸಾವು 9 ವರ್ಷದ ಮಗು ಮತ್ತು 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಹೀಗಾಗಿ ಇಡಿ ಕಟ್ಟಡದ ಪವರ್‌ ಕಟ್‌ ಮಾಡಿ ಹೆಚ್ಚಿನ ಅನಾಹುತ ಆಗದಂತೆ ನೋಡಿಕೊಳ್ಳಲಾಗಿದೆ.

ಕಳೆದ ಎರಡು ದಿನಗಳಿಂದ ಸುರಿತ್ತಿರುವ ಮಳೆಗೆ ಭೂಪಸಂದ್ರ ಬಳಿ ಇರುವ ಪೆಬ್‌ಲ್‌‍ ಬೇ ಅಂಡರ್‌ ಪಾಸ್‌‍ ನದಿಯಂತಾಗಿದೆ. ಸರಿಸಮಾರು ಮೂರರಿಂದ ನಾಲ್ಕು ಅಡಿಗಳಷ್ಟು ತುಂಬಿದ ನೀರನ್ನು ಸಿಬ್ಬಂದಿಗಳು ಮೋಟರ್‌ ಮೂಲಕ ನೀರು ಹೊರ ಹಾಕುತಿದ್ದಾರೆ.

ಮುನ್ನೆಚ್ಚರಿಕೆ ಕಡೆಗಣನೆ; ನಗರದ 200 ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿರುವ ಬಗ್ಗೆ ಒಂದು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಬಿಬಿಎಂಪಿಗೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಯಲಹಂಕ ಸೇರಿದಂತೆ ವಲಯವಾರು ಪ್ರವಾಹ ಸಾಧ್ಯತೆ ಇರುವ ಏರಿಯಾಗಳ ಗುರುತು ಮಾಡಲಾಗಿತ್ತು. ನಂತರ ಪ್ರವಾಹದ ಎಚ್ಚರಿಕೆ ನೀಡಲಾಗಿತ್ತು.

ಎಲ್ಲಾ ಎಂಟು ವಲಯಗಳಲ್ಲಿ ಏ. 15ರಿಂದಲೇ ಪ್ರವಾಹದ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್‌‍ ಇಲಾಖೆಗೆ ಸೂಚನೆ ನೀಡಲಾಗಿತ್ತು.ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಎಚ್ಚರಿಕೆ ನಡುವೆಯೂ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ್ದರಿಂದ ಹೀಗಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಲಹೆ: ಜಯದೇವ ಆಸ್ಪತ್ರೆ ಕಡೆಯಿಂದ ಈಸ್ಟ್‌ ಎಂಡ್‌ ಸರ್ಕಲ್‌, ವರ್ತೂರು ಕಾಲೇಜು ಕಡೆಯಿಂದ ವರ್ತೂರು ಕೋಡಿ, ಕಾಟನ್‌ಪೇಟ್‌‍ ಕಡೆಯಿಂದ ಸುಲ್ತಾನ್‌ಪೇಟೆ ವೃತ್ತ, .ಬಿಳೇಕಹಳ್ಳಿ ಕಡೆಯಿಂದ ಜಿ ಡಿ ಮರ ಹಾಗೂ ಸಾರಕ್ಕಿ ಜಂಕ್ಷನ್‌ ಕಡೆಯಿಂದ ಸಿಂಧೂರ ಜಂಕ್ಷನ್‌ ಮತ್ತು ಮಡಿವಾಳ ಅಯ್ಯಪ್ಪ ಅಂಡರ್‌ ಪಾಸ್‌‍ ಬಳಸದಿರುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

ಬನಶಂಕರಿ ಕಡೆಯಿಂದ ಬರುವ ವಾಹನಗಳನ್ನು ಈಸ್ಟ್‌ ಎಂಡ್‌ ಸರ್ಕಲ್‌ ಬಳಿ ಎಡ ತಿರುವು ತೆಗೆದುಕೊಂಡು ಸಾಗರ್‌ ಜಂಕ್ಷನ್‌ ಗೆ ಬಂದು ಬಲ ತಿರುವು ಮಾಡಿಸಿ ಬನ್ನೇರಘಟ್ಟ ರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ. ಇನ್ನೂ ಮುಂದೆ ಬಂದ ವಾಹನಗಳನ್ನು ಜಯದೇವ ಜಂಕ್ಷನ್‌ನಲ್ಲಿ ಎಡ ತಿರುವು ಮಾಡಿಸಿ ಬನ್ನೇರುಘಟ್ಟ ಮುಖ್ಯರಸ್ತೆ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.

ಬಿ.ಟಿ.ಎಂ ಲೇಔಟ್‌ ಒಳಭಾಗದಿಂದ ಬರುವ ವಾಹನಗಳನ್ನು 16ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಮಾಡಿಸಿ ತಾವರೆಕೆರೆ ಮುಖ್ಯರಸ್ತೆ ಮೂಲಕ ಡಾ. ಮರಿಗೌಡ ರಸ್ತೆ, ಡೈರಿ ಸರ್ಕಲ್‌ ಮೂಲಕ ನಗರ ಪ್ರವೇಶ ಮಾಡಲು ಅನುವು ಮಾಡಿಕೊಡಲಾಗುತ್ತಿದೆ ಎಂದು ಟ್ರಾಫಿಕ್‌ ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News