ಹೊಸಪೇಟೆ,ಮೇ 20- ಕರ್ನಾಟಕ ದೇಶದಲ್ಲೇ ದಾಖಲೆಗಳಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಮೂಲಕ ಆರನೇ ಗ್ಯಾರಂಟಿಯನ್ನು ಯಶಸ್ವಿಯಾಗಿ ಜಾರಿಗೊಳಿಸುವಂತೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಮರ್ಪಣೆ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ವಿಧಾನಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಲಾಗಿತ್ತು.
ಅದನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ ಎಂದು ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯವರು ಟೀಕೆ ಮಾಡಿದ್ದರು. ನಮ ಮೊದಲ ಗ್ಯಾರಂಟಿ ಗೃಹಲಕ್ಷ್ಮಿ ಯಶಸ್ವಿಯಾಗಿ ಕೋಟ್ಯಂತರ ಹೆಣ್ಣುಮಕ್ಕಳಿಗೆ ತಲುಪುತ್ತಿದೆ. ಗೃಹಜ್ಯೋತಿಯಡಿ ಕೋಟ್ಯಂತರ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ.
ಕೋಟ್ಯಂತರ ಕುಟುಂಬಗಳ ಹಸಿವನ್ನು ಅನ್ನಭಾಗ್ಯ ನೀಗಿಸಿದೆ. ಶಕ್ತಿ ಯೋಜನೆಯಡಿ 500 ಕೋಟಿ ಟ್ರಿಪ್‌ಗಳನ್ನು ಮಹಿಳೆಯರು ಪ್ರಯಾಣಿಸಿದರೆ, 3 ಲಕ್ಷ ಯುವ ಸಮುದಾಯಕ್ಕೆ ಯುವನಿಧಿ ಮಾಸಾಶನ ಕಲ್ಪಿಸಿದೆ. ಸಾವಿರಾರು ರೂಪಾಯಿಗಳು ಬಡವರ ಖಾತೆಗಳಿಗೆ ನೇರವಾಗಿ ಜಮಾವಣೆಗೊಳ್ಳುತ್ತಿದೆ. ಈ ಹಣವನ್ನು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಜನರ ಹಣ, ಜನರಿಗೆ ವಾಪಸ್ ನೀಡುವುದು ಮೂಲ ಉದ್ದೇಶವಾಗಿತ್ತು. ಬಿಜೆಪಿಯವರು ಕೆಲವು ಆಯ್ದ ಕುಟುಂಬಗಳಿಗೆ ಮಾತ್ರ ಸಂಪನೂಲ ಸಿಗಬೇಕೆಂದು ಬಯಸುತ್ತದೆ. ನಾವು ಬಡವರು, ಜನಸಾಮಾನ್ಯರು, ಹಿಂದುಳಿದವರಿಗೆ ಹಣ ಸೇರಬೇಕೆಂದು ಬಯಸುತ್ತೇವೆ ಎಂದರು.
ಜನರಿಗೆ ಹಣ ಸಿಕ್ಕರೆ ಅದು ಮಾರುಕಟ್ಟೆಯಲ್ಲಿ ಬಳಕೆಯಾಗುತ್ತಿದೆ. ಇದರಿಂದ ಉತ್ಪಾದನೆ ಹೆಚ್ಚಾಗುತ್ತಿದೆ. ಪ್ರತೀ ಗ್ರಾಮದಲ್ಲೂ ಹಣದ ವಹಿವಾಟು ನಡೆಯುತ್ತಿದೆ. ಇದರಿಂದ ಸಹಜವಾಗಿ ರಾಜ್ಯದ ಆರ್ಥಿಕ ವ್ಯವಸ್ಥೆ ಸುಧಾರಣೆಗೊಳ್ಳುತ್ತಿದೆ ಎಂದು ಹೇಳಿದರು.
ಬಿಜೆಪಿಯವರು ದೇಶದ ಎಲ್ಲಾ ಹಣವನ್ನು ಇಬ್ಬರು, ಮೂವರು ಶ್ರೀಮಂತರಿಗೆ ದೊರಕಿಸಬೇಕೆಂಬುದಾಗಿದೆ. ಈ ಉದ್ಯಮಿಗಳು ಸ್ಥಳೀಯವಾಗಿ ಹಣ ಹೂಡಿಕೆ ಮಾಡುವುದಿಲ್ಲ. ಬದಲಾಗಿ ಲಂಡನ್, ಅಮೆರಿಕಾದಂತಹ ವಿದೇಶಗಳಲ್ಲಿ ಹೂಡಿಕೆ ಮಾಡುತ್ತಾರೆ. ಬಿಜೆಪಿಯ ಕಾರ್ಯನೀತಿಗಳು ಉದ್ಯೋಗನಷ್ಟ ಮಾಡುತ್ತದೆ. ಕಾಂಗ್ರೆಸ್ ಉದ್ಯೋಗ ಸೃಷ್ಟಿಸುತ್ತದೆ. ಬಿಜೆಪಿಯವರ ನೀತಿಗಳಿಂದ ಅನಾರೋಗ್ಯಕ್ಕೆ ಒಳಗಾದವರು ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ನಾವು ಉಚಿತ ಯೋಜನೆಗಳನ್ನು ಜಾರಿಗೊಳಿಸುತ್ತೇವೆ. ಶಿಕ್ಷಣದ ವ್ಯಾಪಾರೀಕರಣ ಬಿಜೆಪಿಯಲ್ಲಿ ಹೆಚ್ಚಾಗಿದೆ ಎಂದರು.