ಹೊಸಪೇಟೆ,ಮೇ 20- ಜಮ್ಮು-ಕಾಶೀರದಲ್ಲಿ ಪಹಲ್ಗಾಮ್ ದಾಳಿಗೂ ಮುನ್ನ ಮೋದಿಯವರಿಗೆ ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೂ ಕೇಂದ್ರಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳದೆ 26 ಮಂದಿ ಅಮಾಯಕ ಪ್ರವಾಸಿಗರ ಹತ್ಯೆಗೆ ಕಾರಣವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇಲ್ಲಿ ನಡೆದ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಪಹಲ್ಗಾಮ್‌ನಲ್ಲಿ ಪೊಲೀಸರಾಗಲೀ, ಗಡಿಭದ್ರತೆಯ ಪಡೆಯಾಗಲೀ ಅಥವಾ ಸೇನೆಯಾಗಲೀ ಪ್ರವಾಸಿಗರಿಗೆ ರಕ್ಷಣೆ ಒದಗಿಸದೇ ಇದ್ದುದ್ದಕ್ಕಾಗಿ 26 ಜೀವಗಳ ಹತ್ಯೆಯಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏ.17 ರಂದು ಜಮು-ಕಾಶೀರ ಪ್ರವಾಸ ನಿಗದಿಯಾಗಿತ್ತು. ಗುಪ್ತಚರ ಇಲಾಖೆ ಅಲ್ಲಿ ಗಲಾಟೆಯಾಗುತ್ತಿದೆ, ಪ್ರವಾಸವನ್ನು ರದ್ದು ಮಾಡಿ ಎಂದು ಸಲಹೆ ನೀಡಿತ್ತು. ಹೀಗಾಗಿ ಪ್ರವಾಸ ರದ್ದುಗೊಂಡಿತ್ತು. ಇವರಿಗೆ ಮೊದಲೇ ಮುನ್ಸೂಚನೆ ಇದ್ದರೂ ಪ್ರವಾಸಿಗರಿಗೆ ಪೊಲೀಸರ ಮೂಲಕ ಏಕೆ ಎಚ್ಚರಿಕೆ ಕೊಡಲಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.
ಪಾಕಿಸ್ತಾನ ಪ್ರತಿಬಾರಿಯೂ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತದೆ. ಸ್ವಂತಶಕ್ತಿ ಇಲ್ಲದೇ ಪಾಕಿಸ್ತಾನವು ಚೀನಾ ಬೆಂಬಲದಿಂದ ನಮ ಮೇಲೆ ದಾಳಿ ಮಾಡುವ ಯತ್ನ ನಡೆಸುತ್ತಿದೆ. ನಾವೆಲ್ಲಾ ಒಟ್ಟಾಗಿ ಯಾರೇ ನಮ ಮೇಲೆ ಯುದ್ಧಕ್ಕೆ ಬಂದರೂ ಅದನ್ನು ಎದುರಿಸುವುದಾಗಿ ಸಂಕಲ್ಪ ತೊಟ್ಟಿದ್ದೇವೆ. ಇಲ್ಲಿ ಜಾತಿ, ಧರ್ಮ, ಪಕ್ಷ ಮುಖ್ಯವಲ್ಲ ಎಂದರು. ದೇಶದ ರಕ್ಷಣೆಗಾಗಿ 2 ಬಾರಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಮೋದಿ ಅದರಲ್ಲಿ ಭಾಗವಹಿಸದೇ ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದರು. ಒಂದು ವೇಳೆ ನಾವು ಗೈರುಹಾಜರಾಗಿದ್ದರೆ ದೇಶದ್ರೋಹಿಗಳು ಎನ್ನುತ್ತಿದ್ದರು. ಮೋದಿ ಗೈರುಹಾಜರಾದರೆ ದೇಶಪ್ರೇಮಿ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಿಂದ ಮಹಾತಗಾಂಧಿ, ಇಂದಿರಾಗಾಂಧಿ, ರಾಜೀವ್‌ಗಾಂಧಿ ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ನಮ ಮೇಲೆ ಬಿಜೆಪಿಯವರು ಗೂಬೆ ಕೂರಿಸುತ್ತಾರೆ. ನ್ಯಾಷನಲ್ ಹೆರಾಲ್‌್ಡ ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ಇ.ಡಿ. ಪ್ರಕರಣ ದಾಖಲಿಸಲಾಗಿದೆ. ಆದಾಯ ತೆರಿಗೆ ನೋಟೀಸ್ ನೀಡಲಾಗಿದೆ. ನಾವು ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದು ಗುಡುಗಿದರು. ಚುನಾವಣೆಯಲ್ಲಿ ಭರವಸೆ ನೀಡಿದಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುಲಲಿತವಾಗಿ ಮುನ್ನಡೆಸುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.
ನರೇಂದ್ರ ಮೋದಿಯವರು 28 ಗ್ಯಾರಂಟಿಗಳನ್ನು ನೀಡಿದರು. ಚುನಾವಣಾ ವೇಳೆ ತಾವು ಅಧಿಕಾರಕ್ಕೆ ಬಂದರೆ ವಿದೇಶದಲ್ಲಿದ್ದ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ.ಗಳನ್ನು ಹಾಕುವುದಾಗಿ ಭರವಸೆ ನೀಡಿದ್ದರು. 2 ಕೋಟಿ ನೌಕರಿ ಸೃಷ್ಟಿಸುವುದಾಗಿ ಹೇಳಿದರು. ಯಾವುದೂ ಈಡೇರಿಲ್ಲ. ನೋಟು ಅಮಾನ್ಯ ಮಾಡಿ ಬಡವರ ಸಂಸಾರಗಳನ್ನು ಬೀದಿಗೆ ತಂದರು ಎಂದು ಆರೋಪಿಸಿದರು.