ಬೆಂಗಳೂರು, ಮೇ 22 – ಜಾರಿ ನಿರ್ದೇಶನಾಲಯದ ದಾಳಿಯಿಂದ ಕಂಗಾಲಾಗಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಮನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೂರವಾಣಿಯಲ್ಲಿ ಪರಮೇಶ್ವರ್‌ರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದು ಕೈಗೆ ಸ್ಟ್ರಿಪ್ಸ್ ಅಂಟಿಸಿಕೊಂಡೇ ಪರಮೇಶ್ವರ್ ಮನೆಗೆ ಆಗಮಿಸಿದರು. ಸುದೀರ್ಘ ಕಾಲ ಚರ್ಚೆ ನಡೆಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹಾಸನ ಸಂಸದ ಶ್ರೇಯಸ್ ಪಟೇಲ್, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಸೇರಿದಂತೆ ಹಲವು ಅಧಿಕಾರಿಗಳು ಗೃಹಸಚಿವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.
ಈ ನಡುವೆ ನಿನ್ನೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಎಂ.ಎ.ಸಲೀಂ ಅವರು ಇಂದು ಬೆಳಿಗ್ಗೆ ಗೃಹಸಚಿವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದರು ಹಾಗೂ ಮುಂದಿನ ದಿನಗಳಲ್ಲಿ ಸಹಕಾರಕ್ಕಾಗಿ ಮನವಿ ಮಾಡಿದರು.