ಬೆಂಗಳೂರು,ಮೇ 22- ಕನ್ನಡ ಜನಶಕ್ತಿ ಕೇಂದ್ರ ಕೊಡಮಾಡುವ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಡಾ.ಹಂಪ ನಾಗರಾಜಯ್ಯ ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು 25 ಸಾವಿರ ರೂ. ನಗದು, ಕಂಚಿನ ಫಲಕ, ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಪ್ರತಿವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಹಂಪನಾ ಎಂದೇ ಪ್ರಸಿದ್ಧರಾದ ನಾಗರಾಜಯ್ಯನವರು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಗೌರವ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಅವರು ತಮ ಅವಧಿಯಲ್ಲಿ ಕನ್ನಡದ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ಲೇಖಕರ ಸುಮಾರು 300 ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
ಕಸಾಪದ ಚಿನ್ನದ ಹಬ್ಬದ ನೆನಪಿಗಾಗಿ ಭವ್ಯಕಟ್ಟಡವನ್ನು ಅವರ ಅಧಿಕಾರಾವಧಿಯಲ್ಲಿ ಕಟ್ಟಿಸಿರುತ್ತಾರೆ. ಹಂಪ ನಾ ಅವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಲೋಕದಲ್ಲಿ ಅವಿರತವಾಗಿ ದುಡಿದಿದ್ದಾರೆ.
ಕಾದಂಬರಿ, ಕಾವ್ಯ, ಇತಿಹಾಸ, ಭಾಷಾ ಶಾಸ್ತ್ರ, ಜೈನ ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ 115ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಂಪ ನಾ ಸಂಶೋಧಕರಲ್ಲಿ ಪ್ರಸಿದ್ಧರಾಗಿದ್ದಾರೆ. ಇವರ ಮಹಾಕಾವ್ಯ ಚಾರು ವಸಂತ ಇಂಗ್ಲಿಷ್, ಪರ್ಷಿಯನ್ ಭಾಷೆ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಿಗೆ ತರ್ಜುಮೆಯಾಗಿದೆ.
ಹಂಪನಾ ಅವರು ದೇಶ-ವಿದೇಶಗಳಲ್ಲಿ ನಡೆದ ಹತ್ತಾರು ಸಾಹಿತ್ಯ ಸಮೇಳನಗಳ ಅಧ್ಯಕ್ಷತೆ ವಹಿಸಿರುತ್ತಾರೆ. ಜೂನ್ 11 ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಜಾನಪದ ವಿದ್ವಾಂಸರಾದ ಗೊ.ರು.ಚನ್ನಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಪಿ.ಮಲ್ಲಿಕಾರ್ಜುನಪ್ಪ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.