ಬೆಂಗಳೂರು, ಮೇ 22– ನಗರದಲ್ಲಿ ಮಳೆ ಅನಾಹುತಕ್ಕೆ ಕಾರಣವಾಗಿರುವ ಒತ್ತುವರಿಯನ್ನು ಯಾರೇ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಎಂದು ಘಂಟಾಘೋಷವಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಉಲ್ಟಾ ಹೊಡೆಯಲು ಕಾರಣವೇನು? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ಎಸ್. ಹರೀಶ್ ಪ್ರಶ್ನಿಸಿದ್ದಾರೆ.
ನಿನ್ನೆ ನಗರ ಪ್ರದಕ್ಷಿಣೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು ರಾಜಕಾಲುವೆ ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಯಾವುದೇ ಮುಲಾಜಿಗೆ ಒಳಗಾಗದೇ ತೆರವುಗೊಳಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅವರು ಈ ಹೇಳಿಕೆ ನೀಡಿದ ಒಂದೇರಡು ಗಂಟೆಯೊಳಗೆ ನಗರದ ಮಾನ್ಯತಾ ಟೆಕ್ ಪಾರ್ಕ್ ಮಾಡಿಕೊಂಡಿರುವ ಒತ್ತುವರಿಯನ್ನು ಸಂಸ್ಥೆಯವರೇ ತೆರವುಗೊಳಿಸುತ್ತಾರೆ ಅವರಿಗೆ 90 ದಿನಗಳ ಗಡುವು ನೀಡುವಂತೆ ಸಿಎಂ ಹೇಳಿದ್ದಾರೆ. ಅವರ ತಕ್ಷಣದ ಈ ಬದಲಾವಣೆಗೆ ಕಾರಣವೇನು ಎಂಬುದರ ನಿಗೂಢ ಸಾರ್ವಜನಿಕರಿಗೆ ಅರ್ಥವಾಗಬೇಕು ಎಂದು ಹರೀಶ್ ಪತ್ರಿಕಾ ಹೇಳಿಕೆಯಲ್ಲಿ ಕೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿರುವ ಕೆ.ಜೆ.ಜಾರ್ಜ್ ಅವರಿಗೆ ಸೇರಿದ ಎಂಬೆಸ್ಸಿ ಸಂಸ್ಥೆ ಇರುವುದು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೀಗಾಗಿ ಅವರಿಗೆ 90 ದಿನಗಳ ಅವಕಾಶ ನೀಡಿರುವ ಉದ್ದೇಶ ನಮಗೆ ಅರ್ಥವಾಗುತ್ತದೆ ಎಂದು ಹರೀಶ್ ಸಿಎಂ ಅವರ ಕಾಲೆಳೆದಿದ್ದಾರೆ.
ತಲೆ ಮೇಲೆ ಸೂರಿಲ್ಲದವರು ರಾಜಕಾಲುವೆ ಸಮೀಪ ನಿರ್ಮಿಸಿಕೊಳ್ಳುವ ಬಡವರ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ದರ್ಪ ಮೆರೆಯುವ ಬಿಬಿಎಂಪಿ ಅಧಿಕಾರಿಗಳು ಬಲಿಷ್ಠರ ಒತ್ತುವರಿಗಳನ್ನು ಏಕೆ ತೆರವುಗೊಳಿಸುತ್ತಿಲ್ಲ ಎನ್ನುವುದು ನಿಮ ಹೇಳಿಕೆಯಿಂದ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ರಾಜರಾಜೇಶ್ವರಿನಗರ ಸುತ್ತಮತ್ತ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಬಡವರ ಮನೆಗಳ ಮೇಲೆ ಜೆಸಿಬಿ ನುಗ್ಗಿಸಿದ್ದ ನಿಮ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆ ಹಾಗೂ ಚಿತ್ರನಟ ದರ್ಶನ್ ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸದೆ ಅವರಿಗೆ ಕೇವಲ ಕಾರಣ ಕೇಳಿ ನೋಟೀಸ್ ನೀಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದಲೂ ಮಳೆಗಾಲದಲ್ಲಿ ಸಾಯಿ ಬಡಾವಣೆ ಜಲಾವೃತವಾಗುತ್ತಿದ್ದರೂ ಅದಕ್ಕೆ ಕಾರಣವಾದ ಒತ್ತುವರಿ ತೆರವುಗೊಳಿಸದೆ ತೆಪ್ಪಗಿರುವುದು ಯಾರನ್ನು ಮೆಚ್ಚಿಸಲಿಕ್ಕೆ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.