Friday, May 23, 2025
Homeರಾಜ್ಯಮೈಸೂರು ರಾಜಮನೆತನಕ್ಕೆ 3,400 ಕೋಟಿ ರೂ. ಟಿಡಿಆರ್‌ ನೀಡಲು ಆದೇಶ : ರಾಜ್ಯ ಸರ್ಕಾರಕ್ಕೆ ಭಾರೀ...

ಮೈಸೂರು ರಾಜಮನೆತನಕ್ಕೆ 3,400 ಕೋಟಿ ರೂ. ಟಿಡಿಆರ್‌ ನೀಡಲು ಆದೇಶ : ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

Order to give TDR of Rs 3,400 crore to Mysore royal family

ನವದೆಹಲಿ,ಮೇ22- ಬೆಂಗಳೂರಿನ ಅರಮನೆ ಮೈದಾನ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾಗಿದೆ. ಜಯ ಮಹಲ್‌ ಹಾಗೂ ಬಳ್ಳಾರಿ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿ ಕೊಳ್ಳಲು ಉದ್ದೇಶಿಸಿರುವ ಭೂಮಿಗೆ ಮೈಸೂರಿನ ರಾಜಮನತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ವಾರಸುದಾರರಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಪ್ರಕಾರ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್‌)ಯಡಿ ಕೂಡಲೇ 3400 ಕೋಟಿ ರೂ. ತಾತ್ಕಾಲಿಕ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಹಾಗೂ ಅರವಿಂದ ಕುಮಾರ್‌ ಅವರನ್ನೊಳಗೊಂಡ ಪೀಠವು ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್‌ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ 15 ಎಕರೆಗೂ ಹೆಚ್ಚು ಭೂಮಿಗೆ 3,400 ಕೋಟಿಯ ಟಿಡಿಆರ್‌ ಅನ್ನು ಮೈಸೂರು ರಾಜಮನೆತನಕ್ಕೆ ಕೂಡಲೇ ನೀಡಬೇಕು ಎಂದು ಆದೇಶಿಸಿದೆ.

ಒಂದು ವಾರದೊಳಗೆ ಟಿಡಿಆರ್‌ ಠೇವಣಿ ಇಡಬೇಕು ಎಂದು ಈ ಹಿಂದೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋಟ್ರ್ನಲ್ಲಿ 3,400 ಕೋಟಿಯ ಟಿಡಿಆರ್‌ ಅನ್ನು ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಅದನ್ನು ರಾಜವಂಶಸ್ಥರಿಗೆ ಹಸ್ತಾಂತರಿಸಬಾರದು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು. ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ನಲ್ಲಿ ಟಿಡಿಆರ್‌ ಇಡಲಾಗಿತ್ತು. ಇದನ್ನು ರಾಜಮನೆತನ ಪರ ವಕೀಲರು ವಿರೋಧಿಸಿದ್ದರು. ರಿಜಿಸ್ಟ್ರಾರ್‌ನಲ್ಲಿ ಇರಬೇಕು ಎಂದು ಸರ್ಕಾರ ವಾದಿಸಿತ್ತು. ಈಗ ಅಂತಿಮವಾಗಿ ರಾಜ್ಯ ಮನೆತನಕ್ಕೆ ಟಿಡಿಆರ್‌ ನೀಡಲು ಸೂಚಿಸಲಾಗಿದೆ.

ಈ ಭೂಮಿಯ ಮೇಲೆ ರಾಜಮನೆತನದ ಹಕ್ಕಿಲ್ಲ ಎನ್ನುವ ರಾಜ್ಯ ಸರ್ಕಾರದ ಅರ್ಜಿ ಇನ್ನೂ ಬಾಕಿ ಇದೆ. ಅಂತಿಮ ಆದೇಶಕ್ಕೆ ಒಳಪಟ್ಟು ಟಿಡಿಆರ್‌ ಸ್ವೀಕರಿಸಲು ಸೂಚನೆ ನೀಡಲಾಗಿದೆ. ಬಳ್ಳಾರಿ ರಸ್ತೆ ಹಾಗೂ ಜಯಮಹಲ್‌ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3400 ಕೋಟಿ ರೂ. ಮೊತ್ತದ ಟಿಡಿಆರ್‌ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿತ್ತು. ಇಷ್ಟು ಮೊತ್ತದ ಪರಿಹಾರ ನೀಡಿದರೆ ಸರ್ಕಾರಕ್ಕೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಜ.23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯ ಸರ್ಕಾರ ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸುಗ್ರೀವಾಜ್ಞೆ ಹೊರಡಿಸಿತ್ತು.

ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ನಿರ್ಣಯವನ್ನು ಸುಪ್ರೀಂಕೋರ್ಟ್‌ಗೆ ತಿಳಿಸಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟಿದ್ದೇವೆ. ಹೀಗಾಗಿ 3400 ಕೋಟಿ ಟಿಡಿಆರ್‌ ಪರಿಹಾರ ನೀಡುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ, ಇದನ್ನು ಪುರಸ್ಕರಿಸದ ಸುಪ್ರೀಂಕೋರ್ಟ್‌ 3400 ಕೋಟಿ ಟಿಡಿಆರ್‌ ಪರಿಹಾರ ನೀಡುವಂತೆ ಈಗಾಗಲೇ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದರೆ ಟಿಡಿಆರ್‌ ನೀಡಿದರೂ ಅದು ಬಳಕೆಯಾಗದಂತೆ ನೋಡಿಕೊಂಡ ಸರ್ಕಾರದ ಪರ ವಕೀಲರು ರಾಜ ಮನೆತನದವರಿಗೆ ನೀಡಬೇಕಿದ್ದ ಟಿಡಿಆರ್‌ ನ್ಯಾಯಾಲಯಕ್ಕೆ ಹಸ್ತಾಂತರವಾಗುವಂತೆ ನೋಡಿಕೊಂಡಿದ್ದರು. ಇತ್ತ ಟಿಡಿಆರ್‌ ನೀಡಲು ಸೂಚಿಸಿದ್ದ ನ್ಯಾಯಾಲಯಕ್ಕೆ ಟಿಡಿಆರ್‌ ನೀಡುವ ಮೂಲಕ ನ್ಯಾಯಾಂಗ ನಿಂದನೆಯಿಂದಲೂ ಸಿದ್ದರಾಮಯ್ಯ ಸರ್ಕಾರ ಪಾರಾಗುವ ಮೂಲಕ ತಾತ್ಕಾಲಿಕವಾಗಿ ನಿರಾಳವಾಗಿತ್ತು. ಬಾಕಿ ಉಳಿದ ಇನ್ನೊಂದು ಟಿಡಿಆರ್‌ ಜಮೀನು ಮಾಲೀಕರಿಗೆ ನೀಡಲು ಒಪ್ಪಿಗೆ ನೀಡಿತ್ತು. 49 ಕೋಟಿ ಟಿಡಿಆರ್‌ ಅನ್ನು ಜಮೀನು ಮಾಲೀಕರಿಗೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌, 3400 ಕೋಟಿ ರೂ. ಮೊತ್ತದ ಟಿಡಿಆರ್‌ ನೀಡಲು ಸಾಧ್ಯವಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಲಿದೆ. ಸಾರ್ವಜನಿಕರ ಹಣವನ್ನು ಈ ರೀತಿ ಖರ್ಚು ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಲ್ಲದೇ 1270 ಚ.ಮೀ. ಭೂಮಿಯನ್ನು ನಾವು ಅಂಡರ್‌ಪಾಸ್‌‍ಗೆ ಬಳಕೆ ಮಾಡಿದರೆ ಅದಕ್ಕೆ 49 ಕೋಟಿ ರೂ. ಟಿಡಿಆರ್‌ ನೀಡಬಹುದು. ಆದರೆ ನಾವು ಅರಮನೆ ಭೂಮಿಯನ್ನು ಬಳಕೆಯನ್ನೇ ಮಾಡಿಲ್ಲ. ಹೀಗಾಗಿ ಟಿಡಿಆರ್‌ ಸಲ್ಲಿಸುವ ಪ್ರಮೇಯವೇ ಬರುವುದಿಲ್ಲ ಎಂದು ಮನವರಿಕೆ ಮಾಡಿದ್ದರು. ಜೊತೆಗೆ, ಈ ಭೂಮಿಯನ್ನು 1994ರಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಆದರೆ 2024ರ ಮೌಲ್ಯದಂತೆ ಪರಿಹಾರ ಕೇಳಲಾಗುತ್ತಿದೆ. ಆದರೆ ನಾವು ಭೂಮಿಯನ್ನು ಬಳಕೆ ಮಾಡಿಲ್ಲ ಎಂಬುದಕ್ಕೆ ನಮ ಬಳಿ ಸಾಕ್ಷ್ಯವಿದೆ ಎಂದು ಅವರು ಹೇಳಿದ್ದರು.

ಪ್ರಕರಣವೇನು?:
ಈ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಬದಲಿಯಾಗಿ ಟಿಡಿಆರ್‌ ನೀಡುವ ಪ್ರಸ್ತಾವವನ್ನು ಬಿಬಿಎಂಪಿಯ ಹಿಂದಿನ ಆಯುಕ್ತರೊಬ್ಬರು ಅರಮನೆಯ ಮಾಲೀಕತ್ವದ ಕುರಿತ ಹೈಕೋರ್ಟ್‌ ಆದೇಶದ ವಿರುದ್ಧ ಮೇಲನವಿ ಸಲ್ಲಿಸಿದ್ದ ಮೈಸೂರು ರಾಜವಂಶಸ್ಥರ ಮುಂದಿಟ್ಟಿದ್ದರು. ಎರಡೂ ಕಡೆಯವರು ಒಪ್ಪಿದ್ದರಿಂದ ರಸ್ತೆ ವಿಸ್ತರಣೆಗೆ ಬೇಕಾದ ಜಾಗವನ್ನು ಟಿಡಿಆರ್‌ ನೀಡಿ ಸ್ವಾಧೀನಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಸಮತಿ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸರ್ಕಾರಗಳು ಈ ಹಿಂದಿನ ಆದೇಶಗಳನ್ನು ಮೂರು ಬಾರಿ ಮಾರ್ಪಾಡು ಮಾಡಿವೆ. ವಿವಾದಿತ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಗಿ 13.91 ಲಕ್ಷ ಚದರಡಿ ನಿರ್ಮಿಸಿದ ಪ್ರದೇಶ ಹಸ್ತಾಂತರಿಸುವ ಪ್ರಸ್ತಾಪವೂ ಒಳಗೊಂಡಿತ್ತು.

ಟಿಡಿಆರ್‌ನಿಂದಾಗಿ ಅನುಮತಿ ನೀಡಿದ ವ್ಯಾಪ್ತಿಯನ್ನು ಮೀರಿ ನಿರ್ಮಾಣ ಮಾಡುವುದಕ್ಕೆ ಡೆವಲಪರ್‌್ಗಳಿಗೆ ಅವಕಾಶವಿರುತ್ತದೆ. ಸರ್ಕಾರ ಪರಿಹಾರವಾಗಿ ಹಣವನ್ನು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಟಿಡಿಆರ್‌ ಅವಕಾಶವನ್ನು ನೀಡುತ್ತದೆ. ರಸ್ತೆ ವಿಸ್ತರಣೆಗಾಗಿ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ಟಿಡಿಆರ್‌ ನೀಡಲು ಮಾರ್ಚ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.

2019ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌‍-ಕಾಂಗ್ರೆಸ್‌‍ ಮೈತ್ರಿ ಸರ್ಕಾರ ರಸ್ತೆ ವಿಸ್ತರಣೆಗಾಗಿ ಅರಮನೆ ಭೂಮಿ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡು, ಆದೇಶ ಹೊರಡಿಸಿತ್ತು. ಬಸವರಾಜ ಬೊಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಿ, ಎರಡೂ ಕಡೆಯ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಟ್ಟಿತ್ತು. ವಶಪಡಿಸಿಕೊಳ್ಳುವ ಭೂಮಿಗೆ ಪರಿಹಾರಾರ್ಥವಾಗಿ ದೊಡ್ಡ ಮೊತ್ತದ ಟಿಡಿಆರ್‌ ನೀಡಬೇಕಾಗುತ್ತದೆ ಎಂಬ ಕಾರಣ ನೀಡಿತ್ತು.

RELATED ARTICLES

Latest News