Saturday, May 24, 2025
Homeರಾಜ್ಯಇನ್ನೂ ಮೂರು ದಿನ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್‌

ಇನ್ನೂ ಮೂರು ದಿನ ಮಳೆ : ಕರಾವಳಿ, ಉತ್ತರ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್‌

Rain for three more days, orange alert in coastal, north Karnataka

ಬೆಂಗಳೂರು, ಮೇ 23-ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಕಳೆದ ನಾಲ್ಕೈದು ದಿನಗಳಿಂದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ. ಅರಬ್ಬೀ ಸಮುದ್ರದ ಪೂರ್ವಭಾಗದ ಗೋವಾ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಜೊತೆಗೆ ಮೈಲೈ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರಾವಳಿ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೆಶಕ ಸಿ.ಎಸ್‌‍.ಪಾಟೀಲ್‌ ತಿಳಿಸಿದ್ದಾರೆ.

ಮೇ 26ರ ವರೆಗೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್‌, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್‌ ಅಲರ್ಟ್‌ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಳಿದ ಜಿಲ್ಲೆಗಳಲ್ಲೂ ಚದುರಿದಂತೆ ಹಾಗೂ ಕೆಲವೆಡೆ ವ್ಯಾಪಕ ಪ್ರಮಾಣದ ಮಳೆ ಮುಂದಿನ ಮೂರು ದಿನಗಳ ಕಾಲ ಬೀಳುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಕೆಲವೆಡೆಯಾಗುವ ಲಕ್ಷಣಗಳಿವೆ ಎಂದು ಅವರು ಹೇಳಿದ್ದಾರೆ.

ಮುಂಗಾರು ಪೂರ್ವ ಮಳೆ ಆರ್ಭಟ ಮುಂದುವರೆದಿದ್ದು, ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಸ್ಟಲ್‌ ರಾಕ್‌ನಲ್ಲಿ 13 ಸೆ.ಮೀ., ಕಾರವಾರ, ಗೋಕರ್ಣದಲ್ಲಿ ತಲಾ 9 ಸೆ.ಮೀ.,ಅಂಕೋಲ, ಕುಮಟಾದಲ್ಲಿ 8 ಸೆ.ಮೀ., ಕೊಟ್ಟಿಗೇಹಾರದಲ್ಲಿ 7 ಸೆ.ಮೀ., ಹೊನ್ನಾವರ, ಯಲ್ಲಾಪುರ, ಲೋಂಡಾ, ಔರಾದ್‌, ಮಂಗಳೂರು,ಉಡುಪಿಯಲ್ಲಿ ತಲಾ 5 ಸೆ.ಮೀ., ಗೇರುಸೊಪ್ಪದಲ್ಲಿ 4ಸೆ.ಮೀ., ಸಿದ್ಧಾಪುರ, ಹಳಿಯಾಳ, ಬೆಳ್ತಂಗಡಿ, ಕಿರವಟ್ಟಿ, ಖಾನಾಪುರ, ಬಾಲ್ಕಿ, ನಿಪ್ಪಾಣಿ, ಬೀದರ್‌, ಬಾಗಮಂಡಲದಲ್ಲಿ ತಲಾ 3 ಸೆ.ಮೀ.ನಷ್ಟು ಮಳೆಯಾಗಿದೆ. ಉಳಿದಂತೆ ಒಂದೆರಡು ಸೆ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES

Latest News