ಬೆಂಗಳೂರು,ಮೇ 23– ನಗರದಲ್ಲಿ ಸುರಿದ ಮಹಾಮಳೆ ಸೃಷ್ಟಿಸಿದ ಅನಾಹುತಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಲೋಕಾಯುಕ್ತರಾದ ಬಿ.ಎಸ್.ಪಾಟೀಲ್ ಗರಂ ಆಗಿದ್ದಾರೆ. ನಿನ್ನೆ ಮಳೆಹಾನಿ ಪ್ರದೇಶಗಳಿಗೆ ಉಪಲೋಕಾಯುಕ್ತರಾದ ವೀರಪ್ಪ ಹಾಗೂ ಫಣೀಂದ್ರ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಪಾಲಿಕೆ, ಜಲಮಂಡಳಿ, ಬಿಎಂಆರ್‌ಸಿಎಲ್‌ನ ವಿವಿಧ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಇಂದು ಮಧ್ಯಾಹ್ನ ಸಂಕ್ಷಿಪ್ತ ವರದಿಯೊಂದಿಗೆ ಲೋಕಾಯುಕ್ತ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ಅದರಂತೆ ಮಧ್ಯಾಹ್ನ 12 ಗಂಟೆ ವೇಳೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ರಾವ್, ಪ್ರಹ್ಲಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಲು ಮುಂದಾದಾಗ ಲೋಕಾಯುಕ್ತರು ಸಿಡಿಮಿಡಿಗೊಂಡಿದ್ದಾರೆ.ಅಕ್ರಮ ಒತ್ತುವರಿ ತೆರವಿಗೆ ಕಠಿಣ ಕ್ರಮ ಕೈಗೊಳ್ಳದೆ ಇರುವುದೇ ಮಳೆ ಅನಾಹುತಗಳಿಗೆ ಕಾರಣವಾಗಿದೆ. ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಪಾಲಿಕೆಗೆ ಸೂಚನೆ ನೀಡಿದ್ದಾರೆ.
ಕೆರೆ, ರಾಜಕಾಲುವೆ ಒತ್ತುವರಿ ತೆರವು ಮಾಡದೆ ಇರುವ ಸಂಬಂಧ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಎಂಟು ವಲಯಗಳ ಮೇಲೂ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಮಳೆ ಅನಾಹುತ ತಡೆಗೆ ಪೂರ್ವತಯಾರಿ ಮಾಡಿ ಆದಷ್ಟು ಬೇಗ ವರದಿ ಸಿದ್ಧಪಡಿಸಿ ನೀಡುವಂತೆ ಲೋಕಾಯುಕ್ತರು ಸೂಚಿಸಿದರು.
ಬೆಂಗಳೂರು ಮಳೆಯ ಅನಾಹುತಗಳನ್ನು ತಡೆಯುವುದೇ ನಮ ಗುರಿಯಾಗಬೇಕು. ನೀವು ಕೆಲಸ ಮಾಡುತ್ತಿದ್ದೀರೋ ಇಲ್ಲವೋ ಎಂಬುದನ್ನು ಗಮನಿಸಲು ಖಾಸಗಿ ಏಜೆನ್ಸಿಯವರನ್ನು ನೇಮಕ ಮಾಡಲಾಗುವುದು. ನಿರ್ಲಕ್ಷ್ಯ ಮಾಡಿದರೆ ನಾನು ಸುಮನಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಲಮಂಡಳಿ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಲೋಕಾಯುಕ್ತರು ಎಲ್ಲ ಡ್ರೈನ್‌ಗಳನ್ನು ಮುಚ್ಚಿಬಿಡುತ್ತೀರ. ನಿಮನ್ನು ಯಾರೂ ಹೇಳೋರು, ಕೇಳೋರು ಇಲ್ಲ. ಜಲಮಂಡಳಿಯವರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿಮ ಜವಾಬ್ದಾರಿಯನ್ನು ಇಲ್ಲಿಯವರೆಗೂ ಸರಿಯಾಗಿ ನಿಭಾಯಿಸಿಲ್ಲ. ನಿಮ ಸಂಸ್ಥೆಗಳಲ್ಲಿ ಹಣದ ಕೊರತೆ ಇಲ್ಲವೇ ಇಲ್ಲ. ಬೇಕಾದಷ್ಟು ಹಣವನ್ನು ಜನರಿಂದ ಸಂಗ್ರಹಿಸುತ್ತೀರಿ. ಹೀಗಿದ್ದರೂ ಕೆಲಸ ಮಾಡಲು ನಿರ್ಲಕ್ಷ್ಯವೇಕೆ ಎಂದು ತರಾಟೆಗೆ ತೆಗೆದುಕೊಂಡರು.
ಪ್ರತಿವರ್ಷ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾದರೆ, ಸಮಸ್ಯೆ ಬಗೆಹರಿಯದಿದ್ದರೆ ಹೇಗೆ? ಜನರ ಸಮಸ್ಯೆ ಬಗೆಹರಿಸುವವರು ಯಾರು? ನಮಲ್ಲಿ ರೂಲ್ ಆಫ್ ಲಾ ಇದೆ ಎಂಬುದನ್ನು ಮರೆಯಬೇಡಿ. ಮುಂದಿನ ದಿನಗಳಲ್ಲಿ ಮಳೆ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ ಲೋಕಾಯುಕ್ತರು, ಒಂದು ವೇಳೆ ಮಳೆ ಅನಾಹುತ ತಡೆಯಲು ವಿಫಲರಾದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.