ರಾಯಬಾಗ, ಮೇ 24– ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂಬ ದೂರಿನ ಮೇರೆಗೆ ಮೇಖಳಿ ಗ್ರಾಮದ ರಾಮಮಂದಿರ ಮಠದ ಸ್ವಯಂ ಘೋಷಿತ ಲೋಕೇಶ್ವರ ಸ್ವಾಮಿಯನ್ನು ಮೂಡಲಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮೇ 22ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಲೂಕಿನ ಗ್ರಾಮವೊಂದರ ಕುಟುಂಬಸ್ಥರು ಎರಡು ವರ್ಷಗಳಿಂದ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮ ಮಂದಿರ ಮಠಕ್ಕೆ ಆಗಾಗ ಹೋಗಿಬರುತ್ತಿರುವುದರಿಂದ ಲೋಕೇಶ್ವರ ಸ್ವಾಮಿ ಪರಿಚಯವಾಗಿತ್ತು.
ಮೇ 13ರಂದು ಬಾಲಕಿ ತನ್ನತಾಯಿಯ ಊರಿಗೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಬರುತ್ತಿದ್ದರು. ಇದೇ ಮಾರ್ಗವಾಗಿ ಲೋಕೇಶ್ವರ ಸ್ವಾಮಿ ಕಾರಿನಲ್ಲಿ ಬರುತ್ತಿದ್ದಾಗ ಬಾಲಕಿಯನ್ನು ನೋಡಿ ಕಾರು ನಿಲ್ಲಿಸಿ ನಾನು ನಿಮ ಮನೆ ಕಡೆಗೆ ಹೋಗುತ್ತಿರುವುದಾಗಿ ಹೇಳಿ ಬಾಲಕಿಯನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ.
ನಂತರ ಬಾಗಲಕೋಟೆ ಮಾರ್ಗವಾಗಿ ಹೋಗುವ ದಾರಿಯ ಮಧ್ಯೆಕಾರು ನಿಲ್ಲಿಸಿ, ಮತ್ತೊಬ್ಬ ವ್ಯಕ್ತಿಯನ್ನು ಕರೆಸಿಕೊಂಡು ರಾಯಚೂರನ ಲಾಡ್‌್ಜ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಮೇ 16ರಂದು ಮುಂಜಾನೆ ಬಾಲಕಿ ಮನೆಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡಾಗ ಮಹಾಲಿಂಗಪೂರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಈ ವಿಷಯ ಯಾರಿಗೂ ಹೇಳಬೇಡಾ ಎಂದು ಕೊಲೆ ಬೆದರಿಕೆ ಹಾಕಲಾಗಿದೆ.
ಬಾಲಕಿಯನ್ನು ಹುಡುಕುತ್ತಿರುವಾಗ ಪೋಷಕರಿಗೆ ಬಾಲಕಿ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾಳೆ. ಹೆದರಿದ ಬಾಲಕಿ ಮೇ 20ರಂದು ತನ್ನ ತಂದೆಯ ಮುಂದೆ ಲೋಕೇಶ್ವರ ಸ್ವಾಮಿ ಮಾಡಿರುವ ಕೃತ್ಯವನ್ನು ಬಾಯಿಬಿಟ್ಟಿದ್ದಾಳೆ. ನಂತರ ಬಾಲಕಿಯರ ತಂದೆ ಮೇ 21ರಂದು ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಜರುಗಿರುವ ವ್ಯಾಪ್ತಿ ಮೂಡಲಗಿ ಪೊಲೀಸ್ ಠಾಣಾ ಸರಹದ್ದಿಗೆ ಬರುವುದರಿಂದ ಆ ಪ್ರಕರಣವನ್ನು ಮೂಡಲಗಿ ಪೊಲೀಸ್ ಠಾಣೆಗೆ ಬಾಗಲಕೋಟೆಯ ಮಹಿಳಾ ಪೊಲೀಸ್ ಠಾಣಾಧಿಕಾರಿಗಳು ಪ್ರಕರಣ ವರ್ಗಾಯಿಸಿದ್ದಾರೆ.
ಲೋಕೇಶ್ವರ ಸ್ವಾಮಿ ಹಿನ್ನೆಲೆ:
ಮೂಲತಃ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ನಿವಾಸಿಯಾದ ಲೋಕೇಶ್ವರ್ ಶಾಬಣ್ಣ ಭಂಗಿ(30) ಎಂಬಾತ ಕಳೆದ ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ 10 ಎಕರೆ ಸರ್ಕಾರಿ ಗೈರನ್ ಜಾಗದಲ್ಲಿ ಕೆಲವು ಸ್ಥಳೀಯರ ಸಹಕಾರದೊಂದಿಗೆ 2019ರಲ್ಲಿ ರಾಮ ಮಂದಿರ ಮಠ ಎಂದು ಸ್ಥಾಪನೆ ಮಾಡಿದ್ದ. ಸಾಕಷ್ಟು ಅಕ್ರಮ ಚಟುವಟಿಕೆ ಮಾಡುತ್ತಿರುವ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಪೊಲೀಸರಿಗೆ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಕೂಡಾ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ಬಂದ ಕೂಡಲೇ ಸ್ವಾಮಿಯನ್ನ ಊರು ಬಿಡಿಸಲಾಗಿತ್ತು. ಕೆಲವು ತಿಂಗಳ ನಂತರ ಮತ್ತೇ ಬಂದು ತನ್ನ ಅಕ್ರಮ ಚಟುವಟಿಕೆ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.ಮೇಖಳಿ ಗ್ರಾಮದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಮಠದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಇದರ ಬಗ್ಗೆ ಹಿಂದೆ ಸ್ವಾಮೀಜಿಗೆ ನೋಟಿಸ್ ಕೂಡ ನೀಡಲಾಗಿತ್ತು.